ದಾವಣಗೆರೆ:- ಜಿಲ್ಲೆಯ ಹೊನ್ನಾಳಿ ಠಾಣೆ ಪೊಲೀಸರು ಕಡಿಮೆ ಬೆಲೆಗೆ ಚಿನ್ನದ ನಾಣ್ಯ ನೀಡುವುದಾಗಿ ನಂಬಿಸಿ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಹಾಡೋನಹಳ್ಳಿ ಗ್ರಾಮದ ಪರಶುರಾಮ ಹಾಗೂ ನ್ಯಾಮತಿ ತಾಲೂಕಿನ ದಾನಿಹಳ್ಳಿ ಗ್ರಾಮದ ಮನೋಜ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 5.90 ಲಕ್ಷ ರೂ. ನಗದು, ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿಗಳು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕುಂದೂರು ಗ್ರಾಮದ ಮೂರ್ತಿ ಎಂಬುವರಿಗೆ ವಂಚನೆ ನಡೆಸಿದ್ದರು. ಮನೆ ಅಡಿಪಾಯ ತೆಗೆಯುವ ವೇಳೆ ಬಂಗಾರದ ನಾಣ್ಯಗಳು ಸಿಕ್ಕಿವೆ ಎಂದು ಹೇಳಿ, ಅವುಗಳನ್ನು ಕಡಿಮೆ ದರಕ್ಕೆ ನೀಡುವುದಾಗಿ ನಂಬಿಸಿದ್ದರು. ನಂಬಿಕೆ ಮೂಡಿಸಲು ಆರಂಭದಲ್ಲಿ ಪರೀಕ್ಷೆಗೆ ಅಸಲಿ ನಾಣ್ಯಗಳನ್ನು ನೀಡಿದ್ದು, ಖರೀದಿ ಸಮಯದಲ್ಲಿ ನಕಲಿ ನಾಣ್ಯಗಳನ್ನು ನೀಡಿ ಸುಮಾರು 6 ಲಕ್ಷ ರೂ. ನಗದು ಪಡೆದು ಪರಾರಿಯಾಗಿದ್ದರು.
ವಂಚನೆಯ ವಿಷಯ ತಿಳಿದ ಮೂರ್ತಿ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ವೇಳೆ ಆರೋಪಿ ಪರಶುರಾಮ ಈ ಹಿಂದೆ ಸಾಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಎಂಬುದು ತಿಳಿದು ಬಂದಿದೆ.



