ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳಿಗೆ ಬರುವ ಅಶ್ಲೀಲ ಕಮೆಂಟ್‌ಗಳು ಹಾಗೂ ಮೆಸೇಜ್‌ಗಳನ್ನು ಹಿಂದಿನಂತೆ ಮೌನವಾಗಿ ಸಹಿಸುವ ಕಾಲ ಮುಗಿದಿದೆ. ಇದೀಗ ಹಲವರು ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಪೊಲೀಸ್ ಠಾಣೆಗಳ ಮೆಟ್ಟಿಲು ಏರುತ್ತಿದ್ದಾರೆ. ಈ ಸಾಲಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಸೇರಿದ್ದಾರೆ.
ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್‌ಗಳು ಹಾಗೂ ಅವಾಚ್ಯ ಸಂದೇಶಗಳು ಬಂದ ಹಿನ್ನೆಲೆಯಲ್ಲಿ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ‘ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಇತ್ತೀಚೆಗೆ ಅವರು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಹೇಳಿಕೆಯ ಬೆನ್ನಲ್ಲೇ ಸೈಬರ್ ಕ್ರೈಂ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರಿನ ಚಿಕ್ಕಬಾಣಾವರದ ಆಟೋ ಚಾಲಕ ಚಂದ್ರು ಹಾಗೂ ದಾವಣಗೆರೆ ಮೂಲದ ಇಂಜಿನಿಯರ್ ನಿತಿನ್ ಬಂಧಿತರು. ಇವರು ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಪದಗಳಿಂದ ನಿಂದನೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆಯೇ ಆರೋಪಿಗಳು ತಮ್ಮ ಪೋಸ್ಟ್‌ಗಳನ್ನು ಡಿಲೀಟ್ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಸೈಬರ್ ಪೊಲೀಸರು ಐಪಿ ಅಡ್ರೆಸ್ ಆಧರಿಸಿ ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ಈ ಪ್ರಕರಣದಲ್ಲಿ ಇನ್ನಷ್ಟು ಬಂಧನಗಳಾಗುವ ಸಾಧ್ಯತೆ ಇದೆ.
ಅಶ್ಲೀಲ ಕಮೆಂಟ್ ಮಾಡಿದವರು ಯಾವ ನಟರ ಅಭಿಮಾನಿಗಳು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ಬಂಧನ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯಕ್ಕೆ ಕಠಿಣ ಸಂದೇಶ ರವಾನಿಸಿದೆ.



