ಬೆಂಗಳೂರು: ಪಾಕಿಸ್ತಾನದ ಪರವಾಗಿ ಜೈಕಾರ ಹಾಕಿದ ಇಬ್ಬರು ಕಿಡಿಗೇಡಿಗಳನ್ನ ಜೆಪಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಇನಾಯತ್ ಉಲ್ಲಾ ಖಾನ್ ಹಾಗೂ ಸೈಯದ್ ಮುಬಾರಕ್ ಎಂದು ಗುರುತಿಸಲಾಗಿದೆ. ನಗರದ ಪಬ್ ಒಂದರಲ್ಲಿ ಜನರು ಇಂಡಿಯಾ ಆಸ್ಟ್ರೇಲಿಯಾ ಮ್ಯಾಚ್ ನೋಡುತ್ತಿದ್ದ ವೇಳೆ ಭಾರತ ಗೆದ್ದ ಖುಷಿಯಲ್ಲಿ ಭಾರತ್ ಮಾತಾಕೀ ಜೈ ಎಂದು ಸಂಭ್ರಮಿಸಿದ್ದಾರೆ. ಇದೇ ವೇಳೆ ಅದೇ ಪಬ್‍ನಲ್ಲಿ ಕುಡಿಯುತ್ತ ಕುಳಿತಿದ್ದ ಆರೋಪಿಗಳು ಸೇರಿದಂತೆ ಮತ್ತಿಬ್ಬರು ಪಾಕ್ ಪರ ಘೋಷಣೆ ಕೂಗಿದ್ದಾರೆ.
ಪಾಕ್ ಪರ ಘೋಷಣೆ ಕೂಗುತ್ತಿದ್ದಂತೆ ಇವರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿ ಗಲಾಟೆ ಮಾಡಿದ್ದಾರೆ. ಕೂಡಲೇ ಪಬ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದರು. ಕಿಡಿಗೇಡಿಗಳ ಮಾಹಿತಿ ಪಡೆದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಹುಡುಕಾಟ ನಡೆಸುತ್ತಿದ್ದಾರೆ.