ಬೆಂಗಳೂರು: ರಾಜಧಾನಿಯಲ್ಲಿ ಮನಕಲಕುವ ರಸ್ತೆ ದುರಂತ ಸಂಭವಿಸಿದ್ದು, ಶಾಲಾ ಬಸ್ ಹರಿದು ಇಬ್ಬರು ಪುಟ್ಟ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಥಣಿಸಂದ್ರದ ಪೊಲೀಸ್ ಕ್ವಾರ್ಟರ್ಸ್ ಸಮೀಪ ನಡೆದಿದೆ.
ಮೃತ ಮಕ್ಕಳನ್ನು ವರ್ಷಾ (2) ಮತ್ತು ಭಾನು (4) ಎಂದು ಗುರುತಿಸಲಾಗಿದೆ. ಯಾದಗಿರಿ ಮೂಲದ ನಾಗನಗೌಡ ಅವರು ಸಿಎಆರ್ ವಿಭಾಗದಲ್ಲಿ ಕಾನ್ಸ್ಟೇಬಲ್ ಆಗಿದ್ದು, ತಮ್ಮ ಮಗಳು ವರ್ಷಾ ಹಾಗೂ ಅಣ್ಣನ ಮಗಳು ಭಾನು ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹಾಲು ತರಲು ತೆರಳುತ್ತಿದ್ದರು.
ಇದೇ ವೇಳೆ ಸ್ಕೂಲ್ ಟೈಮ್ ಆಗಿದ್ದರಿಂದ ಖಾಸಗಿ ಶಾಲೆಯ ಬಸ್ ಮಕ್ಕಳ ಪಿಕಪ್‌ಗೆ ತೆರಳುತ್ತಿತ್ತು. ಬಸ್ ಬರುತ್ತಿರುವುದನ್ನು ಗಮನಿಸಿದ ನಾಗನಗೌಡ ಅವರು ಬೈಕ್ ನಿಲ್ಲಿಸಿದ್ದರೆಂದು ತಿಳಿದುಬಂದಿದೆ. ಆದರೆ ಹೆಣ್ಣೂರು ಸಂಚಾರಿ ಠಾಣಾ ವ್ಯಾಪ್ತಿಯ ಥಣಿಸಂದ್ರ ಬಳಿ ಬಸ್ ಯೂ-ಟರ್ನ್ ತೆಗೆದುಕೊಳ್ಳುವಾಗ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ಪರಿಣಾಮ ಇಬ್ಬರು ಮಕ್ಕಳು ಬೈಕ್‌ನಿಂದ ಕೆಳಗೆ ಬಿದ್ದು, ಬಸ್‌ನ ಹಿಂಬದಿ ಚಕ್ರ ಅವರ ಮೇಲೆ ಹರಿದಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದಾರೆ. ನಾಗನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆ ಕುರಿತು ಉತ್ತರ ವಿಭಾಗದ ಸಂಚಾರ ಡಿಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಣ್ಣೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಾಲಾ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.



