ಹಾವೇರಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮೈದುನನೋರ್ವ ಅತ್ತಿಗೆ ಹಾಗೂ ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಲೆಗೈದು ಪರಾರಿಯಾಗಿರುವ ಘಟನೆ ಜರುಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ಈ ಘಟನೆ ಜರುಗಿದ್ದು, ಗೀತಾ ಮರಿಗೌಡ್ರ (32) ಅಕುಲ (10) ಹಾಗೂ ಏಳು ವರ್ಷದ ಅಂಕಿತಾ ಕೊಲೆಗೀಡಾದ ದುರ್ಧೈವಿಗಳು.
ಮೈದುನ ಕುಮಾರಗೌಡ್ ಮರಿಗೌಡ್ರ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮೃತ ಗೀತಾಳ ಪತಿ ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಲಾಗುತ್ತಿದ್ದು, ಹೊನ್ನೆಗೌಡನ ಒಡಹುಟ್ಟಿದ ತಮ್ಮ ಕುಮಾರ್‌ಗೌಡನೇ ಕೊಲೆ ಮಾಡಿ ಪರಾರಿಯಾದ ಪಾಪಿ.
ಸುದ್ದಿ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.
ಈ ಕುರಿತು ಹಾನಗಲ್ ಎಸ್ಪಿ ಶಿವಕುಮಾರ್ ಗುಣಾರೆ ಪ್ರತಿಕ್ರಿಯೆ ನೀಡಿದ್ದು, ಆಸ್ತಿ ವಿಚಾರಕ್ಕೆ ಕೊಲೆಯಾಗಿರುವ ಶಂಕೆಯಿದ್ದು, ಹಾನಗಲ್ ಪಟ್ಟಣದಲ್ಲಿ ವಾಣಿಜ್ಯ ಮಳಿಗೆ ಇದೆ, ಅದರ ಬಾಡಿಗೆ ಹಣ ಮೃತ ಗೀತಾಳ ಖಾತೆಗೆ ಹಾಕಲಾಗುತ್ತಿತ್ತು. ಕೊಲೆ ಆರೋಪಿ ಕುಮಾರ್ ಈ ಹಿಂದೆ ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ದುಶ್ಚಟಕ್ಕೆ ಬಲಿಯಾಗಿದ್ದ.
ಆರೋಪಿ ಕುಮಾರ್ ಅಣ್ಣನ ಜೊತೆಗೆ ಚನ್ನಾಗಿಯೇ ಇದ್ದ. ಆದರೆ ಕೊಲೆ ಯಾವ ಕಾರಣಕ್ಕಾಗಿ ನಡೆದಿದೆ ಎಂಬುದು ಆರೋಪಿ ಬಂಧನದ ನಂತರ ಗೊತ್ತಾಗಲಿದ್ದು, ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.