ಮಂಗಳೂರು: ಕೌಟುಂಬಿಕ ಕಲಹ ಮತ್ತು ಕ್ಷುಲ್ಲಕ ಕಾರಣಗಳು ಎರಡು ಪ್ರತ್ಯೇಕ ಜಿಲ್ಲೆಗಳಲ್ಲಿ ಭೀಕರ ಹಿಂಸಾಚಾರಕ್ಕೆ ಕಾರಣವಾಗಿರುವ ಘಟನೆಗಳು ವರದಿಯಾಗಿವೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಬೀದರ್ ಜಿಲ್ಲೆಯಲ್ಲಿ ವಕೀಲನ ಮೇಲೆ ಚಾಕು ದಾಳಿ ನಡೆದಿದೆ.
ಮಂಜೇಶ್ವರ ತಾಲೂಕಿನ ತೂಮಿನಾಡಿನಲ್ಲಿ ನಡೆದ ಕೌಟುಂಬಿಕ ಕಲಹದಲ್ಲಿ ಜುಮೈಲ (18) ಮತ್ತು ಶೇಕುಂಞ (55) ಮೃತರಾಗಿದ್ದಾರೆ. ಆರೋಪಿ ಉಮರ್ ಫಾರೂಕ್ ಅನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಫಾರೂಕ್ ಹಾಗೂ ಪತ್ನಿ ತಾಹಿರ ನಡುವೆ ಕಲಹ ನಡೆಯುತ್ತಿದ್ದು, ವಿಚ್ಛೇದನದ ಹಂತಕ್ಕೂ ವಿಚಾರ ತಲುಪಿತ್ತು. ಇದೇ ವೇಳೆ ಆಸ್ತಿ ತನ್ನ ಹೆಸರಿಗೆ ಮಾಡಿಕೊಡುವಂತೆ ಫಾರೂಕ್ ಒತ್ತಾಯಿಸಿದ್ದಾನೆ ಎನ್ನಲಾಗಿದೆ.
ಈ ವಿಚಾರವಾಗಿ ಉಮರ್ ಫಾರೂಕ್ ಮತ್ತು ಆತನ ಬಾವ ಶೇಕುಂಞ ನಡುವೆ ಜಗಳ ಆರಂಭವಾಗಿದ್ದು, ಜಗಳ ಬಿಡಿಸಲು ಹೋದ ಜುಮೈಲಗೆ ಕತ್ತಿ ತಗುಲಿ ಆಕೆ ಮೃತಪಟ್ಟಿದ್ದಾಳೆ. ಗಂಭೀರ ಗಾಯಗೊಂಡಿದ್ದ ಶೇಕುಂಞ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವಿದೇಶದಿಂದ ಕೆಲ ತಿಂಗಳ ಹಿಂದಷ್ಟೇ ಮರಳಿದ್ದ ಫಾರೂಕ್ ಮಾದಕ ವ್ಯಸನಿಯಾಗಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಇನ್ನೊಂದು ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ವಕೀಲನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಬೆನ್ ಚಿಂಚೊಳ್ಳಿ ನಿವಾಸಿ 26 ವರ್ಷದ ಅನಿಲ್ ಕುಮಾರ್ ಗಾಯಗೊಂಡಿದ್ದು, ಹಂದಿ ಸಾಕಾಣಿಕೆ ವಿಚಾರವಾಗಿ ನಡೆದ ಜಗಳ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲು ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.
ಘಟನೆ ಸಂಬಂಧ ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಗಾಯಗೊಂಡ ಅನಿಲ್ ಕುಮಾರ್‌ಗೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡೂ ಪ್ರಕರಣಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



