ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಲಿಂಗಾಪುರ ಮತ್ತು ಕ್ಯಾಸಿನಕೆರೆಯಲ್ಲಿ ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ್ ನಡೆಸುತ್ತಿದ್ದ ನಕಲಿ ವೈದ್ಯರನ್ನು ಬಂಧಿಸಿ ತಲಾ ಲಕ್ಷ ರೂ.ಗಳ ದಂಡ ಪಾವತಿಸುವಂತೆ ಹಾಗೂ ಮೆಡಿಕಲ್ ಸ್ಟೋರ್ ಮುಚ್ಚುವಂತೆ ಜಿಲ್ಲಾಧಿಕಾರಿ ಹಾಗೂ ಕೆಪಿಎಂಇ ನೊಂದಣಿ ಪ್ರಾಧಿಕಾರ ಹಾಗೂ ಸಾರ್ವಜನಿಕ ಕುಂದುಕೊರತೆ ನಿವಾರಣಾ ಸಮಿತಿ ಅಧ್ಯಕ್ಷರಾದ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಲಿಂಗಾಪುರದಲ್ಲಿ ಶ್ರೀನಿವಾಸ್(57), ಕ್ಯಾಸಿನಕೆರೆಯಲ್ಲಿ ಲಕ್ಷ್ಮಣ(45) ಸಿಕ್ಕಿಬಿದ್ಧ ನಕಲಿ ವೈದ್ಯರಾಗಿದ್ದು, ಹೊನ್ನಾಳಿ ಎಸಿ ಅಭಿಷೇಕ್ ಏಕಾಏಕಿ ನಡೆಸಿದ ದಾಳಿ ವೇಳೆ ಸಿಕ್ಕಿಬಿದ್ದಿದ್ದು, ಹಲವು ವರ್ಷಗಳಿಂದ ಅನಧಿಕೃತ ಕ್ಲಿನಿಕ್ ನಡೆಸುತ್ತಾ ಬಂದಿದ್ದರು.
ತಪಾಸಣೆ ವೇಳೆ ಬಿಇಎಂಎಸ್ ಪ್ರಮಾಣ ಪತ್ರ ಹೊಂದಲಾಗಿದೆ ಎಂಬ ಮಾಹಿತಿ ನೀಡಿದ್ದು ಇದು ಅಮಾನ್ಯ ಪ್ರಮಾಣ ಪತ್ರವಾಗಿರುವುದರಿಂದ ನಕಲಿ ಎಂದು ಪರಿಗಣಿಸಿ ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಉಪವಿಭಾಗಾಧಿಕಾರಿ ಅಭಿಷೇಕ್ ಕಳೆದ ಕೆಲ ದಿನಗಳ ಹಿಂದೆ ರೋಗಿಯಂತೆ ಮಾರುವೇಷದಲ್ಲಿ ದಾಳಿ ಮಾಡಿದ್ದರು.