ತೆಲುಗಿನ ಜನಪ್ರಿಯ ರಿಯಾಲಿಟಿ ಶೋ Bigg Boss Telugu Season 9 ಅಂತಿಮ ಹಂತಕ್ಕೆ ತಲುಪಿದೆ. ಒಟ್ಟು 98 ದಿನಗಳನ್ನು ಪೂರೈಸಿರುವ ಈ ಸೀಸನ್ ಇದೀಗ ಫಿನಾಲೆ ವಾರಕ್ಕೆ ಕಾಲಿಟ್ಟಿದೆ. ಈ ವೀಕೆಂಡ್‌ನಲ್ಲಿ ಸೀಸನ್ 9ರ ಕಪ್ ಯಾರ ಮುಡಿಗೆ ಸೇರುತ್ತದೆ ಎಂಬುದು ಸ್ಪಷ್ಟವಾಗಲಿದೆ.
ಫಿನಾಲೆ ಸ್ಪರ್ಧಿಗಳ ಪಟ್ಟಿಯಲ್ಲಿ ಕನ್ನಡದ ಇಬ್ಬರು ನಟಿಯರಾದ ಸಂಜನಾ ಗಲ್ರಾನಿ ಹಾಗೂ ತನುಜಾ ಪುಟ್ಟಸ್ವಾಮಿ ಸ್ಥಾನ ಪಡೆದುಕೊಂಡಿರುವುದು ವಿಶೇಷ. ಕಳೆದ ಭಾನುವಾರ ನಡೆದ ಡಬಲ್ ಎಲಿಮಿನೇಷನ್‌ನಲ್ಲಿ ಇಬ್ಬರು ಸ್ಪರ್ಧಿಗಳು ಹೊರಬಿದ್ದಿದ್ದು, ಐವರು ಮಾತ್ರ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಸಂಜನಾ, ತನುಜಾ ಜೊತೆಗೆ ಕಲ್ಯಾಣ್, ಇಮ್ಯಾನ್ಯುಲ್ ಮತ್ತು ಪವನ್ ಫೈನಲ್ ರೇಸ್‌ನಲ್ಲಿ ಉಳಿದಿದ್ದಾರೆ.
ಈ ಐವರು ಆರಂಭದಿಂದಲೇ ಆಟದಲ್ಲಿ ಸ್ಥಿರತೆ ತೋರಿಸಿದ್ದು, ಪರಸ್ಪರ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ವಿಶೇಷವಾಗಿ ಫಿನಾಲೆವರೆಗೆ ಬಂದಿರುವ ಕನ್ನಡದ ಇಬ್ಬರು ಸ್ಪರ್ಧಿಗಳಲ್ಲಿ ಒಬ್ಬರು ಟ್ರೋಫಿ ಗೆಲ್ಲುವ ಸಾಧ್ಯತೆ ಇದೆ ಎಂಬ ಚರ್ಚೆ ಜೋರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಜನಾ ಹಾಗೂ ತನುಜಾಗೆ ಕನ್ನಡ ಅಭಿಮಾನಿಗಳು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.



