ದಾವಣಗೆರೆ:- ಚಿಗಟೇರಿ ಜಿಲ್ಲಾಸ್ಪತ್ರೆ ಬಳಿ ನಡೆದಿದ್ದ ಪೊಲೀಸರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಅವರ ಇನ್ನಿಬ್ಬರು ಪುತ್ರರಾದ ಹುಸೇನ್ ಮತ್ತು ಹಮ್ಝಾರನ್ನು ಪೊಲೀಸರು ಬಂಧಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಮೊಬೈಲ್ ಲೊಕೇಷನ್ ಹಾಗೂ ಸಿಡಿಆರ್ ಮಾಹಿತಿಗಳ ಆಧಾರದ ಮೇಲೆ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಕಳೆದ ಶನಿವಾರ ಆರೋಪಿಗಳನ್ನು ಬಂಧಿಸಲು ಬಡಾವಣೆ ಠಾಣೆಯ ಸಿಪಿಐ ಗಾಯಿತ್ರಿ ಹಾಗೂ ಕಾನ್ಸ್‌ಟೇಬಲ್‌ಗಳಾದ ಹರೀಶ್ ಮತ್ತು ಕೆಂಚಪ್ಪ, ಸ್ಥಳಕ್ಕೆ ತೆರಳಿದ್ದ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಯೂಬ್ ಪೈಲ್ವಾನ್ ಅವರ ಮತ್ತೊಬ್ಬ ಪುತ್ರ ಹಸೇನ್ ನನ್ನು ಪೊಲೀಸರು ಬಂಧಿಸಿದ್ದರು.
ಆರೋಪಿಗಳ ಬಂಧನಕ್ಕಾಗಿ ಸಿಟಿ ಡಿವೈಎಸ್ಪಿ ಶರಣಬಸವೇಶ್ವರ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಬಂಧಿತ ಆರೋಪಿಗಳನ್ನು ಇಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



