ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತದ ದುರ್ಘಟನೆಗಳು ಮುಂದುವರಿದಿವೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಯುವ ಜೀವಗಳು ಮೃತಪಟ್ಟಿರುವ ಘಟನೆ ತೀವ್ರ ಚಿಂತೆಗೆ ಕಾರಣವಾಗಿದೆ. ಹೌದು ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕು,
ಕೂಡ್ಲುರು ಗ್ರಾಮದಲ್ಲಿ ಬೆಳಗ್ಗೆ ಎದ್ದು ಮುಖ ತೊಳೆಯುತ್ತಿದ್ದ ವೇಳೆ ಪುರುಷೋತ್ತಮ್(35) ಎಂಬ ವ್ಯಕ್ತಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಪ್ರಾಣ ಹೋಗಿದೆ. ಮಗನ ಕಳೆದುಕೊಂಡ ಕುಟುಂಬ ದುಃಖದಲ್ಲಿ ಮುಳುಗಿದೆ.
ಇನ್ನೂ ಚಿಕ್ಕಮಗಳೂರು ಮೂಡಿಗೆರೆ ತಾಲೂಕು, ಭಾರೀಬೈಲು ಗ್ರಾಮದಲ್ಲಿ 29 ವರ್ಷದ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ. ಎದೆ ಉರಿ ಎಂದು ನಿನ್ನೆ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದಳು. ಆಸ್ಪತ್ರೆಗೆ ಬರುವಾಗ ಅರ್ಧ ಗಂಟೆ ಲೇಟ್ ಆಗಿತ್ತು.
ಮಳೆಯಿಂದ ರಸ್ತೆಗೆ ಮರಬಿದ್ದು ಆಸ್ಪತ್ರೆಗೆ ಬರುವುದೂ ತಡವಾಗಿತ್ತು. ಮೊನ್ನೆಯಿಂದಲೂ ಯುವತಿಯ ಆರೋಗ್ಯ ಸರಿ ಇರಲಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲೋ ಬಿಪಿ ಎಂದು ಹೇಳಿದ್ದರು. ನಿನ್ನೆ ಎದೆ ಉರಿ ಜಾಸ್ತಿಯಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ರು. ಆಸ್ಪತ್ರೆಗೆ ಬರುವಷ್ಟರಲ್ಲೇ ಹೃದಯಾಘಾತ ಸಂಭವಿಸಿದೆ.
ಹೃದಯಾಘಾತವು ಈಗ ಎಚ್ಚರಿಕೆಯ ಸಂಕೇತವಾಗಿದ್ದು,ತೀವ್ರ ಎದೆ ಉರಿ, ಉಸಿರಾಟ ತೊಂದರೆ, ದೇಹ ದುರ್ಬಲತೆ ಕಂಡುಬಂದಾಗ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಾವಶ್ಯಕ. ಆರೋಗ್ಯದ ಕಡೆ ನಿರ್ಲಕ್ಷ್ಯವೇ ಪ್ರಾಣಾಪಾಯಕ್ಕೆ ದಾರಿ ಎನ್ನುವುದನ್ನು ಮರೆಯಬಾರದು.