ಗದಗ:- ಕೋಟ್ಯಾಂತರ ಮೊತ್ತದ ಕಡಲೆ ಖರೀದಿ ಮಾಡಿ ರೈತರಿಗೆ ಉಂಡೆನಾಮ ಹಾಕಿ ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾರುತಿಗೌಡ ಹಾಗೂ ಶ್ರೀನಿವಾಸ್ ಬಂಧಿತ ಆರೋಪಿಗಳು. ಗದಗ ಎಸ್ಪಿ ಬಿಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಗ್ರಾಮೀಣ ಸಿಪಿಐ ಸಿದ್ದರಾಮೇಶ್ವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಖಚಿತ ಮಾಹಿತಿ ಮೇರೆಗೆ ದಾವಣಗೆರೆಯಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಘಟನೆ ಹಿನ್ನೆಲೆ:-
ಗದಗ ಜಿಲ್ಲೆಯ 450 ರೈತರು ತಾವು ಕಷ್ಟಪಟ್ಟು ಬೆಳೆದಿದ್ದ 370 ಟನ್ ಕಡಲೆಯನ್ನು ಮಾರಾಟ ಮಾಡಿದ್ದರು. ದಾವಣಗೆರೆ ಮೂಲದ ಮಾರುತಿಗೌಡ ಹಾಗೂ ಶ್ರೀನಿವಾಸ್ ಎಂಬ ಆರೋಪಿಗಳು ರೈತರಿಂದ ಕಡಲೆ ಖರೀದಿಸಿ ಬಳಿಕ ಹಣ ಕೊಡದೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದರು. ರೈತರಿಗೆ ಕೊಡಬೇಕಿದ್ದ 6 ಕೋಟಿ 50 ಲಕ್ಷ ಕೊಡದೆ ವಂಚನೆ ಮಾಡಿದ್ದರು.
ಮೊದಲು ರೈತರಿಗೆ 27 ಕೋಟಿ ರೂಪಾಯಿಗಳ ಪೈಕಿ 20 ಕೋಟಿ 50 ಲಕ್ಷವನ್ನು ಆರೋಪಿಗಳು ಪಾವತಿ ಮಾಡಿದ್ದರು. ಇನ್ನುಳಿದ 6 ಕೋಟಿ 50 ಲಕ್ಷ ಕೊಡದೆ ಮಾರುತಿಗೌಡ ರೈತರನ್ನು ಕಾಡಿಸುತ್ತಿದ್ದ. ಇದರಿಂದ ಬರೋಬ್ಬರಿ ಒಂದು ವರ್ಷದಿಂದ ಹಣಕ್ಕಾಗಿ ಅಲೆದು-ಅಲೆದು ರೈತರು ಸುಸ್ತಾಗಿ ಹೋಗಿದ್ದರು. ಅಷ್ಟೇ ಅಲ್ಲದೇ ಬಾಕಿ ಹಣಕ್ಕೆ ಕಳೆದ ಮೂರು ದಿನಗಳಿಂದ ಜಿಲ್ಲಾಡಳಿತ ಭವನದ ಎದುರು ರೈತರು ಅಹೋರಾತ್ರಿ ಧರಣಿ ಕೈಗೊಂಡಿದ್ದರು. ರೈತರ ಹೋರಾಟಕ್ಕೆ ಸ್ಪಂದನೆ ಸಿಗದ ಕಾರಣ ಗೀತಾ ಹಾಗೂ ಸರಸ್ವತಿ ಎಂಬ ಇಬ್ಬರು ರೈತ ಮಹಿಳೆಯರು ಆತ್ಮಹತ್ಯೆಗೂ ಯತ್ನಿಸಿದರು. ಕೂಡಲೇ ಅವರುಗಳನ್ನು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಇದೀಗ ರೈತರಿಗೆ ವಂಚನೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರ ಕಾರ್ಯಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.