ಗದಗ: ಜಿಲ್ಲೆಯಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದ ಇಬ್ಬರು ಟಗರು ಕಳ್ಳರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಸ್, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಇದರಿಂದ ಸಾರ್ವಜನಿಕರು ಭಯಭೀತರಾಗಿದ್ದರು. ಇದೀಗ ಗದಗ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡುವ ಮೂಲಕ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬೆಣ್ಣೆಹಳ್ಳಿಯ ಸೆಂಟ್ರಿಂಗ್ ಕೆಲಸಗಾರ ಆಕಾಶ್ ಫಕ್ಕೀರಪ್ಪ ಭಜಂತ್ರಿ ಹಾಗೂ ಗದಗ ತಾಲೂಕಿನ ಕಳಸಾಪೂರದ ಆಟೋ ಡ್ರೈವರ್ ಶಿವರಾಜ್ ಚಂದ್ರಪ್ಪ ಭಜಂತ್ರಿ ಎಂದು ಗುರುತಿಸಲಾಗಿದೆ.
ಹುಲಕೋಟಿ ಗ್ರಾಮದಲ್ಲಿ ಜುಲೈ 2 ರಂದು ಮನೆ ಮುಂದೆ ಕಟ್ಟಿದ್ದ 5 ಟಗರು ಕಳ್ಳತನವಾಗಿದ್ದವು. ಈ ಬಗ್ಗೆ ಮಾಲೀಕ ಗಿರಿಯಪ್ಪ ಅಳವಂಡಿ ಅವರು ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಗ್ರಾಮೀಣ ಪೊಲೀಸರು, ಇದೀಗ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಸಿ.ಇ.ಎನ್ ಹೆಚ್ಚುವರಿ ಪ್ರಭಾರಿ ಡಿಎಸ್ಪಿ ಮಹಾಂತೇಶ್ ಸಜ್ಜನ ಹಾಗೂ ಗದಗ ಉಪ ವಿಭಾಗದ ಡಿವೈ ಎಸ್ಪಿ ಮುರ್ತುಜಾ ಖಾದ್ರಿ ಅವರ ನಿರ್ದೇಶನದಂತೆ ಅಖಾಡಕ್ಕೆ ಇಳಿದ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದರಾಮೇಶ್ವರ ಗಡೇದ ನೇತೃತ್ವದ ತಂಡ ಮೂವರು ಕಳ್ಳರನ್ನು ಲಾಕ್ ಮಾಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಬಂಧಿತರಿಂದ 3 ಲಕ್ಷ 85 ಸಾವಿರ ರೂಪಾಯಿ ಮೌಲ್ಯದ 25 ಟಗರುಗಳನ್ನು ವಶಕ್ಕೆ ಪಡೆದಿದ್ದಾರೆ.
ಹಲವು ಆಯಾಮಗಳ ಮೂಲಕ ಹಾಗೂ ವೈಜ್ಞಾನಿಕ ವಿಧಾನಗಳ ಮೂಲಕ ಮಾಹಿತಿ ಕಲೆ ಹಾಕಿ ಆರೋಪಿಗಳನ್ನು ಪತ್ತೆ ಹಚ್ಚಿದ ಸಿದ್ದರಾಮೇಶ್ವರ ಗಡೇದ, ಎಸ್ ಬಿ ಕವಲೂರ, ಪ್ರಕಾಶ್ ಗಾಣಿಗೇರ, ಬಸವರಾಜ್ ಗುಡ್ಲಾನೂರ, ಹೇಮಂತ ಪರಸಣ್ಣನವರ, ಅಶೋಕ ಬೂದಿಹಾಳ, ಅನಿಲ ಬನ್ನಿಕೊಪ್ಪ, ಕೋಟೆಪ್ಪ ಒಡೆಯರ, ಪ್ರವೀಣ ಶಾಂತಪ್ಪನವರ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ಸಿಬ್ಬಂದಿ ಗುರು ಬೂದಿಹಾಳ, ಸಂಜೀವ ಕೊರಡೂರ ಇವರಿಗೆ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.



