ಕೋಲಾರ: ಕೋಲಾರ ಜಿಲ್ಲೆಯ ಅರಹಳ್ಳಿ ಕೆರೆಯಲ್ಲಿ ದುರಂತ ಘಟನೆ ಸಂಭವಿಸಿದ್ದು, ಕೆರೆಗೆ ಬಿದ್ದಿದ್ದ ಮಕ್ಕಳನ್ನು ರಕ್ಷಿಸಲು ಮುಂದಾದ ಇಬ್ಬರು ಮಹಿಳೆಯರು ನೀರುಪಾಲಾಗಿದ್ದಾರೆ.
ಮೃತರನ್ನು ಮೊಹಮದಿ (25) ಮತ್ತು ಸಲ್ಮಾ (26) ಎಂದು ಗುರುತಿಸಲಾಗಿದೆ. ಇಬ್ಬರೂ ಕೋಲಾರ ನಿಸಾರ್ ನಗರದ ನಿವಾಸಿಗಳಾಗಿದ್ದಾರೆ.
ಮಾಹಿತಿಯ ಪ್ರಕಾರ, ಮಹಿಳೆಯರು ಹಾಗೂ ಮಕ್ಕಳು ಅರಹಳ್ಳಿ ಕೆರೆಗೆ ಬಟ್ಟೆ ತೊಳೆಯಲು ತೆರಳಿದ್ದ ಸಂದರ್ಭದಲ್ಲಿ ಮಕ್ಕಳು ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ನೀರಿಗೆ ಇಳಿದಾಗ ಇಬ್ಬರು ಮಹಿಳೆಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಲ್ಮಾ ಅವರು ಮನೆಯಲ್ಲಿ ನಡೆದ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕೋಲಾರಿಗೆ ಬಂದಿದ್ದರೆಂದು ತಿಳಿದುಬಂದಿದೆ.
ಘಟನೆಯ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.



