ಬೆಂಗಳೂರು: ನಗರದಲ್ಲಿ ಹುಡುಗರಂತೆ ಡ್ರೆಸ್ ಮಾಡಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಜ.13ರಂದು ಸಂಪಿಗೇಹಳ್ಳಿ ನಿವಾಸಿ ಸಂಗಮೇಶ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇಬ್ಬರು ಹುಡುಗರು ನಡೆದುಕೊಂಡು ಹೋಗುತ್ತಿರುವಂತೆ ಕಾಣಿಸಿಕೊಂಡಿತ್ತು.
ಆದರೆ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದ ವೇಳೆ, ಅವರು ಹುಡುಗರಲ್ಲ, ಹುಡುಗಿಯರು ಎಂಬುದು ಬೆಳಕಿಗೆ ಬಂದಿದೆ. ಕಳ್ಳತನ ಎಸಗಿದ್ದ ಶಾಲು ಮತ್ತು ನೀಲು ಎಂಬ ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಟ್ಯಾನರಿ ರಸ್ತೆ ನಿವಾಸಿಗಳಾಗಿದ್ದು, ಪ್ಯಾಂಟ್-ಶರ್ಟ್, ಟೋಪಿ ಧರಿಸಿ ಹುಡುಗರಂತೆ ವೇಷಧರಿಸಿ ಬೈಕಿನಲ್ಲಿ ಸಂಚರಿಸುತ್ತಿದ್ದರು.
ಇವರು ನಿರ್ಜನ ಪ್ರದೇಶದಲ್ಲಿರುವ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಹಾಡುಹಗಲೇ ಕಳ್ಳತನ ನಡೆಸುತ್ತಿದ್ದುದಾಗಿ ತಿಳಿದುಬಂದಿದೆ. ಸದ್ಯ ಇಬ್ಬರನ್ನು ಬಂಧಿಸಿರುವ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.



