ಶಿವಮೊಗ್ಗ: ಕೇಂದ್ರ ಕಾರಾಗೃಹಕ್ಕೆ ಬಿಸ್ಕೆಟ್ ಪ್ಯಾಕೆಟ್‌ಗಳಲ್ಲಿ ಗಾಂಜಾ ಮತ್ತು ಸಿಗರೇಟ್ ಕಳ್ಳಸಾಗಾಣೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಜೈಲು ಸಿಬ್ಬಂದಿ ಬಂಧಿಸಿದ್ದಾರೆ.
ಬಂಧಿತರಿಂದ ನಿರ್ಬಂಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರ ವಿವರ:-
ಬಂಧಿತರು ಭದ್ರಾವತಿ ನಿವಾಸಿಗಳಾದ ರಾಹಿಲ್ ಹಾಗೂ ತಸೀರುಲ್ಲಾ, ಇಬ್ಬರೂ 19 ವರ್ಷ ವಯಸ್ಸಿನವರು. ಈ ಇಬ್ಬರೂ ಯುವಕರು, ಜೈಲಿನಲ್ಲಿ ವಿಚಾರಣಾಧಿಕಾರದಲ್ಲಿ ಇರುವ ಕೈದಿ ಮೊಹಮ್ಮದ್ ಗೌಸ್ ಅಲಿಯಾಸ್ ಜಂಗ್ಲಿ ಎಂಬಾತನ ಸಂದರ್ಶನಕ್ಕೆಂದು ಬಂದಿದ್ದರು.
ಬಿಸ್ಕೆಟ್ ಪ್ಯಾಕೆಟ್‌ನಲ್ಲಿ ಗಾಂಜಾ “ಪ್ಯಾಕ್”:-
ಶನಿವಾರ ಸಂಜೆ 4:30ರ ಸುಮಾರಿಗೆ ಸಂದರ್ಶನಕ್ಕೆ ಆಗಮಿಸಿದ ಇಬ್ಬರೂ, ಮೂರು ಬಿಸ್ಕೆಟ್ ಪ್ಯಾಕೆಟ್‌ಗಳನ್ನು ಕೈದಿಗೆ ನೀಡಲು ಯತ್ನಿಸಿದರು. ಈ ವೇಳೆ ಜೈಲು ಸಿಬ್ಬಂದಿಗೆ ಅನುಮಾನ ಬಿದ್ದು ಪ್ಯಾಕೆಟ್‌ಗಳನ್ನು ಪರಿಶೀಲಿಸಿದಾಗ, ಗಮ್ ಟೇಪ್‌ನಿಂದ ಸುತ್ತಿದ ಪ್ಯಾಕೆಟ್‌ಗಳು ದೊರಕಿದವು. ಪರಿಶೀಲನೆ ನಡೆಸಿದಾಗ, ಒಂದು ಗಾಂಜಾ ಪ್ಯಾಕೆಟ್ ಹಾಗೂ ಎರಡು ಸಿಗರೇಟ್ ಪ್ಯಾಕೆಟ್‌ಗಳು ಪತ್ತೆಯಾದವು.
ಪೊಲೀಸ್ ತನಿಖೆ ಆರಂಭ:-
ಘಟನೆಯ ನಂತರ, ಜೈಲು ಸಿಬ್ಬಂದಿ ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿ, ಆರೋಪಿಗಳನ್ನು ತುಂಗಾನಗರ ಪೊಲೀಸ್ ಠಾಣೆಗೆ ಒಪ್ಪಿಸಿದರು. ಕೇಂದ್ರ ಜೈಲು ಅಧೀಕ್ಷಕ ಡಾ. ರಂಗನಾಥ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಇದೀಗ ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.