ಬೆಂಗಳೂರು:- ಇಲ್ಲಿನ ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಮುಲಾಜಿಲ್ಲದೇ ಬಂಧಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರು ಖಡಕ್ಕಾಗಿ ಸೂಚನೆ ಕೊಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಮೈಸೂರು ಡಿಸಿ, ಎಸ್ಪಿ ಹಾಗೂ ಮೈಸೂರು ಪೊಲೀಸ್ ಆಯುಕ್ತರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಇಡೀ ಘಟನೆಯ ಸಂಪೂರ್ಣ ಮಾಹಿತಿ ತಿಳಿದುಕೊಂಡು ಅಧಿಕಾರಿಗಳಿಗೆ ಕೆಲವೊಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಭಾಗಿ ಆದವರನ್ನು ಮುಲಾಜಿಲ್ಲದೇ ಬಂಧಿಸಿ ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪೋಸ್ಟ್ ಮಾಡಿದ ವ್ಯಕ್ತಿ ಮೇಲೆ ಎಫ್‌ಐಆರ್ ದಾಖಲು ಮಾಡುವಾಗ ತಡವಾಗಿತ್ತು ಎಂಬ ವಿಚಾರದ ಬಗ್ಗೆಯೂ ಸಿಎಂ ವಿವರಣೆ ಕೇಳಿದ್ದಾರೆ. ಪೊಲೀಸ್ ಲೋಪ ಆಗಿದೆ ಎಂಬ ಆರೊಪದ ಬಗ್ಗೆಯೂ ವಿವರಣೆ ಕೇಳಿದ ಸಿಎಂ ಅದೆಲ್ಲದರ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ. ಇಲಾಖೆ ಮಟ್ಟದಲ್ಲಿ ಆಗಲಿ ಘಟನೆಗೆ ಕಾರಣ ಆದವರಾಗಲಿ ಯಾರು ತಪ್ಪು ಮಾಡಿದ್ದರು ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.