ಉಡುಪಿ: ಶೀರೂರು ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿಯ ಜೋಡುಕಟ್ಟೆಯಿಂದ ಶ್ರೀ ಕೃಷ್ಣ ಮಠದವರೆಗೆ ನಡೆದ ಪರ್ಯಾಯ ಮೆರವಣಿಗೆಗೆ ಕೇಸರಿ ಧ್ವಜ ತೋರಿಸಿ ಚಾಲನೆ ನೀಡಿದ ವಿಚಾರ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಕೇಸರಿ ಧ್ವಜ ಪ್ರದರ್ಶಿಸಿ ಮೆರವಣಿಗೆಗೆ ಚಾಲನೆ ನೀಡಿದ್ದನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಕ್ಷೇಪಿಸಿದ್ದು, ಈ ಕುರಿತು ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದೆ. ಜ.18ರ ಮುಂಜಾನೆ ಸುಮಾರು 3 ಗಂಟೆಗೆ ನಡೆದ ಪರ್ಯಾಯ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಅವರು ಭಾಗವಹಿಸಿದ್ದರು. ಮೆರವಣಿಗೆ ಆರಂಭಕ್ಕೂ ಮೊದಲು ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಅವರು ಕೇಸರಿ ಧ್ವಜವನ್ನು ಜಿಲ್ಲಾಧಿಕಾರಿಯವರಿಗೆ ಹಸ್ತಾಂತರಿಸಿದ್ದು, ಅದನ್ನು ಡಿಸಿ ಸಾರ್ವಜನಿಕವಾಗಿ ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ನಡೆ ಸರ್ಕಾರಿ ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್, ಈ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ತಾವು ನಗರಸಭೆಯ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾಗಿ ತಿಳಿಸಿದ್ದಾರೆ. ಶತಮಾನಗಳ ಇತಿಹಾಸ ಹೊಂದಿರುವ ಪರ್ಯಾಯ ಪದ್ಧತಿಯಂತೆ ಧ್ವಜ ನಿಶಾನೆ ತೋರಿಸುವುದು ಸಂಪ್ರದಾಯದ ಭಾಗವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಪ್ರೇರಿತ ಭಾಗವಹಿಸುವಿಕೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ಕಾಂಗ್ರೆಸ್ ನೀಡಿರುವ ದೂರಿಗೆ ಬಿಜೆಪಿ ಹಾಗೂ ಸಂಘಟನೆಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಡುಪಿ ಪರ್ಯಾಯ ಮಹೋತ್ಸವದ ಧಾರ್ಮಿಕ ಸಂಪ್ರದಾಯವನ್ನು ಪ್ರಶ್ನಿಸುವುದು ತಪ್ಪು ಎಂದು ಬಿಜೆಪಿ ವಲಯಗಳು ಆರೋಪಿಸಿದ್ದು, ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುವುದು ಅನಾವಶ್ಯಕ ರಾಜಕೀಯ ಎಂದು ಕಿಡಿಕಾರಿವೆ. ಈ ಮೂಲಕ ಪರ್ಯಾಯ ಮಹೋತ್ಸವದ ಧ್ವಜ ವಿಚಾರ ಉಡುಪಿಯಲ್ಲಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.



