ಚಾಮರಾಜನಗರ:- ಯುಗಾದಿ ಹಬ್ಬದ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಲ್ಲಿ ಅದ್ದೂರಿಯಾಗಿ ಜಾತ್ರೆ ನಡೆಯಲಿದೆ. ಹೀಗಾಗಿ 3 ದಿನ ಕಾಲ ಬೆಟ್ಟಕ್ಕೆ ತೆರಳುವ ವಾಹನಗಳಿಗೆ ನಿಷೇಧ ಹೇರಲಾಗಿದೆ.
ಬೆಟ್ಟದಲ್ಲಿ ಯುಗಾದಿ ಜಾತ್ರೆ ಹಿನ್ನಲೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಮಾ. 29ರಿಂದ ಮಾ. 31ರವರೆಗೆ ದ್ವಿಚಕ್ರ ವಾಹನ ಹಾಗೂ ಆಟೋರಿಕ್ಷಾ, ಗೂಡ್ಸ್ ವಾಹನಗಳ ಪ್ರವೇಶ ನಿಷೇಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ.
ಹನೂರು ತಾಲೂಕಿನ ಕೌದಳ್ಳಿ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಅಮಾವಾಸ್ಯೆ ಪೂಜೆ ಹಾಗೂ ಭಾನುವಾರ ಯುಗಾದಿ ರಥೋತ್ಸವ ಹಿನ್ನಲೆ ಸಹಸ್ರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಇನ್ನೂ ದೇವಾಲಯದಲ್ಲಿ ಜಾತ್ರೆ ಪ್ರಯುಕ್ತ ಮಾದೇಶ್ವರ ಸ್ವಾಮಿಗೆ ಶುಕ್ರವಾರ ಬೆಳಿಗ್ಗೆ ಗಂಧಾಭಿಷೇಕ, ಬಿಲ್ವಾರ್ಚನೆ, ರುದ್ರಾಭಿಷೇಕ, ಮಹಾ ಮಂಗಳಾರತಿ ಮಾಡಿದ ಬಳಿಕ ಧರ್ಮ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ದೇವಾಲಯಕ್ಕೆ ಬಂದಿದ್ದ ಭಕ್ತರು ಎಣ್ಣೆ ಮಜ್ಜನ ಸೇವೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಮಾಡಿದರು. ನಂತರ ರುದ್ರಾಕ್ಷಿ ಮಂಟಪ, ಹುಲಿವಾಹನ, ಬಸವ ವಾಹನ, ಪಂಜಿನ ಸೇವೆ, ಧೂಪದ ಸೇವೆ, ಉರುಳು ಸೇವೆಯನ್ನು ಮಾಡಿ ಸಂಜೆ 7ಕ್ಕೆ ನಡೆದ ಚಿನ್ನದ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಮೆರೆದರು.