ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಹಬ್ಬಗಳ ತವರೂರು ಭಾರತ. ಹಿಂದೂ ಸಂಸ್ಕೃತಿಯಲ್ಲಿ ಹಲವಾರು ಹಬ್ಬಗಳು ಬರುತ್ತವೆ. ಆ ಎಲ್ಲ ಹಬ್ಬಗಳಲ್ಲಿ ಯುಗಾದಿ ಮೊದಲ ಹಬ್ಬ. ವಸಂತ ಋತುವಿನಲ್ಲಿ ಪ್ರಕೃತಿಯಲ್ಲಿ ಹೊಸತನ ಕಾಣುತ್ತೇವೆ. ಮರ-ಗಿಡ, ಬಳ್ಳಿಗಳಲ್ಲಿ ಹೊಸ ಚಿಗುರು, ಕೋಗಿಲೆಯ ಸುಮಧುರ ಧ್ವನಿ ಮನುಷ್ಯನ ಚೈತನ್ಯಕ್ಕೆ ಕಾರಣವಾಗುತ್ತವೆ. ಜೀವ ಸಂಕುಲಕ್ಕೆ ಯುಗಾದಿ ಹೊಸ ವರುಷ ಸ್ಫೂರ್ತಿಯನ್ನು ತಂದು ಕೊಡುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಭಾನುವಾರ ತಾಲೂಕಿನ ತಿರುಮಲಕೊಪ್ಪ ಗ್ರಾಮ ವ್ಯಾಪ್ತಿಯ ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಾರಥೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭಾರತೀಯ ಸಂಸ್ಕೃತಿಯಲ್ಲಿ ಬರುವ ಪ್ರತಿಯೊಂದು ಹಬ್ಬಗಳಿಗೆ ತನ್ನದೇ ಆದ ಇತಿಹಾಸ, ಹಿನ್ನೆಲೆ ಇರುತ್ತದೆ. ಕಳೆದು ಹೋದ ದಿನಗಳ ಆತ್ಮ ನಿರೀಕ್ಷಣೆ ಮಾಡಿ ಹೊಸ ವರುಷದಲ್ಲಿ ಮಾದರಿಯಾಗಿ ಹೆಜ್ಜೆಯನ್ನು ಇಡಬೇಕು ಎಂಬುದಕ್ಕೆ ಯುಗಾದಿ ಹೊಸ ವರುಷ ಚೈತನ್ಯ ನೀಡುತ್ತದೆ. ಕ್ರೋಧಿನಾಮ ಸಂವತ್ಸರ ತೆರೆಗೆ ಸರಿದು ಇದೀಗ ವಿಶ್ವಾವಸುನಾಮ ಸಂವತ್ಸರದಲ್ಲಿ ಪಾದಾರ್ಪಣೆ ಮಾಡಿದ್ದೇವೆ. ಬೇವು-ಬೆಲ್ಲ ಕಷ್ಟ ಸುಖಗಳ ಸಂಕೇತವಾಗಿದೆ. ಯಾವಾಗಲೂ ಕಷ್ಟ-ಸುಖ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಬದುಕು ಸಾಗಿಸಬೇಕೆಂಬುದನ್ನು ಯುಗಾದಿಯಿಂದ ತಿಳಿಯಬಹುದಾದ ಸಂದೇಶವಾಗಿದೆ.
ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಕೃತ, ತ್ರೇತ, ದ್ವಾಪರ ಮತ್ತು ಕಲಿಯುಗಗಳಲ್ಲಿ ಅವತರಿಸಿ ಶಿವಜ್ಞಾನ ಸಂಪತ್ತನ್ನು ಬೋಧಿಸಿ ಉದ್ಧರಿಸಿದ್ದಾರೆ. ಜಾತಿ ಮತ ಪಂಥಗಳೆನ್ನದೆ ಸರ್ವರಿಗೂ ಒಳಿತನ್ನು ಬಯಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ನಿರಂತರ ಸಾಧನೆ ಮತ್ತು ಪ್ರಯತ್ನದಿಂದ ಮಾನವ ಪರಮಾತ್ಮನೆಡೆಗೆ ಸಾಗಲು ಸಾಧ್ಯವೆಂಬುದನ್ನು ತೋರಿದ ಪರಮಾಚಾರ್ಯರು. ಹೊಸ ವರುಷದ ಯುಗಾದಿ ದಿನದಂದು ಶ್ರೀ ಜಗದ್ಗುರು ಧರ್ಮ ನಿವಾಸದಲ್ಲಿ ಸಂಭ್ರಮದಿAದ ಆಚರಿಸುತ್ತಿರುವುದು ತಮಗೆ ಸಂತಸ ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಯುಗಾದಿ ಹೊಸ ವರುಷ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಔಚಿತ್ಯ ಕುರಿತು ಮಾತನಾಡಿದರು. ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ಬ್ಯಾಹಟ್ಟಿ ಮರುಳಸಿದ್ದೇಶ್ವರ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಪ್ರವಚನ ನೆರವೇರಿಸಿದ ದಾನಯ್ಯ ದೇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಂಸದ ಮಂಜುನಾಥ ಕುನ್ನೂರು, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ದ್ರುವ ಜತ್ತಿ, ಜತ್ತದ ಬಸವರಾಜ ಹಿರೇಮಠ, ಪ್ರಭುದೇವ ಸಾಲಿಮಠ, ಶ್ರೀಕಂಠಗೌಡ ಹಿರೇಗೌಡ್ರ, ಮುರುಳಿ ಬಡಿಗೇರ, ಗಂಗಾಧರ ನಾವಳ್ಳಿಮಠ, ಶಂಕರಗೌಡ ಪಾಟೀಲ, ಗುರುಸಿದ್ಧಯ್ಯ ಹಿರೇಮಠ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ನೂಲ್ವಿಯ ಜಗನ್ನಾಥಗೌಡ ಸಿದ್ಧನಗೌಡ್ರ ಸ್ವಾಗತಿಸಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ, ತಿರುಮಲಕೊಪ್ಪದ ಹೆಚ್.ಎಂ. ಕರೇಕನ್ನಮ್ಮನವರ ನಿರೂಪಿಸಿದರು. ಯಲಿವಾಳದ ರಾಣಿ ಚೆನ್ನಮ್ಮಾ ಸ್ವಯಂ ಸೇವಾ ಸಂಸ್ಥೆಯ ಮಕ್ಕಳಿಂದ ಮಲ್ಲಕಂಬ ಪ್ರದರ್ಶನ ಜರುಗಿತು. ಜಾನಪದ ಕಲಾ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಮಾರಂಭಕ್ಕೂ ಮುನ್ನ ಶ್ರೀ ಜಗದ್ಗುರು ರೇಣುಕಾಚಾರ್ಯರ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಸಮಾರಂಭ ಉದ್ಘಾಟಿಸಿದ ಸಾವಯವ ಕೃಷಿ ತಜ್ಞೆ ಡಾ. ಕವಿತಾ ಮಿಶ್ರಾ ಮಾತನಾಡಿ, ರೈತ ದೇಶದ ಬೆನ್ನೆಲುಬು. ರೈತನೇ ನಿಜವಾದ ಶ್ರೀಮಂತ. ದೇಶದ ಜನತೆಗೆ ಅನ್ನ ಕೊಡುವ ಬಹು ದೊಡ್ಡ ಶಕ್ತಿ ಆತನಿಗಿದೆ. ಭೂಮಿ ತಾಯಿಗೆ ಬೆವರು ಸುರಿಸಿ ದುಡಿದರೆ ಭೂತಾಯಿ ಎಂದಿಗೂ ಕೈ ಬಿಡುವುದಿಲ್ಲ. ರೈತ ಮಹಿಳೆಯರ ಶ್ರಮ ಸಾಧನೆ ಮರೆಯುವಂತಿಲ್ಲ. ರಾಸಾಯನಿಕ ಗೊಬ್ಬರ ಹಾಕದೇ ಸಾವಯವ ಕೃಷಿಯಿಂದ ಬೆಳೆ ಬೆಳೆದರೆ ಅದರಿಂದ ಉತ್ತಮ ಆರೋಗ್ಯ ಭೂಮಿ ಫಲವತ್ತತೆ ಕಾಪಾಡಿಕೊಂಡು ಬರಲು ಸಾಧ್ಯವಾಗುತ್ತದೆ. ಕೊರೊನಾ ಸಂದರ್ಭದಲ್ಲಿ ಎಲ್ಲರೂ ಕೈ ಬಿಟ್ಟರೂ ರೈತ ಬೆಳೆ ಬೆಳೆದು ಜನ ಸಮುದಾಯಕ್ಕೆ ಅನ್ನ ಕೊಟ್ಟಿದ್ದನ್ನು ಗಮನಿಸಬಹುದು. ಚಿನ್ನವಿಲ್ಲದೇ ಬದುಕಬಹುದು ಅನ್ನವಿಲ್ಲದೇ ಮನುಷ್ಯ ಬದುಕಲಾರನೆಂದರು.