ಭಾರತ ದೇಶದ ಜೀವಾಳವೇ ಹಬ್ಬಗಳು. ರಸ ಋಷಿಗಳು ಬಾಳಿಬದುಕಿದ ಬೀಡು. ಹಲವು ಸಂಪ್ರದಾಗಳ ತವರೂರು, ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭವ್ಯ ಭಾರತ ನಮ್ಮ ದೇಶ. ಪ್ರಕೃತಿಯಲ್ಲಿ ವರ್ಷದಲ್ಲಿ ಒಂದು ಸಾರಿ ಬದಲಾವಣೆ ಕಾಣುತ್ತೇವೆ. ಮರ-ಗಿಡಗಳಲ್ಲಿ ಹೊಸ ಚಿಗುರೊಡೆದು ಮದುವಣಗಿತ್ತಿಂತೆ ಕಂಗೊಳಿಸಿ, ಕೋಗಿಲೆಗಳನ್ನು ಬರಮಾಡಿಕೊಳ್ಳುವ ಹಬ್ಬ ಯುಗಾದಿ.
ಹಣ್ಣೆಲೆಗಳ್ಳೆಲ್ಲ ಉದುರಿ, ಮರ-ಗಿಡಗಳೆಲ್ಲ ಹೊಸ ಚಿಗುರಿನೊಂದಿಗೆ ಕಂಗೊಳಿಸುವ ಕಾಲವಿದು. ಪ್ರಕೃತಿಯು ತನ್ನ ಮೈಕೊಡವಿ ಹಸಿರನ್ನುಟ್ಟು ಅಪ್ಸರೆಯಂತೆ ಮೆರೆಯುವ ಸವಿಗಾಲ ಯುಗಾದಿಯ ಕಾಲವಾಗಿದೆ.
ಯುಗಾದಿಯಲ್ಲಿ ಚಾಂದ್ರಮಾನ ಯುಗಾದಿ, ಸೌರಮಾನ ಯುಗಾದಿ ಆಚರಣೆಯಲ್ಲಿವೆ. ಚಂದ್ರನ ಚಲನೆಯನ್ನು ಆಧರಿಸಿ ಚಾಂದ್ರಮಾನ ಯುಗಾದಿ ಹಾಗೂ ಸೂರ್ಯನ ಚಲನೆಯನ್ನು ಆಧರಿಸಿ ಸೌರಮಾನ ಯುಗಾದಿ ಎಂದು ಆಚರಿಸುತ್ತಾರೆ. ನಮ್ಮ ಕರ್ನಾಟಕದಲ್ಲಿ ಚಾಂದ್ರಮಾನ ಯುಗಾದಿ ಆಚರಿಸಿದರೆ, ತಮಿಳುನಾಡು, ಕೇರಳ ಹಾಗೂ ಉತ್ತರ ಭಾರತದಲ್ಲಿ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. ಅಲ್ಲದೆ, ಯುಗಾದಿಗೆ ಬೇರೆ ಬೇರೆ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಮಾತ್ರವಲ್ಲದೆ ಹಬ್ಬದ ಆಚರಣೆಯ ವಿಧಿ ವಿಧಾನಗಳು ವಿಭಿನ್ನವಾಗಿರುತ್ತವೆ.
ಯುಗಾದಿಯ ದಿನದಂದು ವಿಶೇಷವಾಗಿ ಪಂಚಾಗವನ್ನು ಪೂಜಿಸಿ ಪಂಚಾಂಗ ಶ್ರವಣ ಮಾಡಲಾಗುತ್ತದೆ. ಪಂಚಾಂಗವೆಂದರೆ ಹಿಂದೂ ಕ್ಯಾಲೆಂಡರ್. ಇದರಿಂದ ನಮಗೆ ತಿಥಿ, ವಾರ ನಕ್ಷತ್ರ, ಯೋಗ, ಕರಣದ ಪರಿಕಲ್ಪನೆ ಸಿದ್ಧಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರ ಮನೆಯಲ್ಲಿಯೂ ಪಂಚಾಂಗ ಇರಬೇಕು ಎನ್ನುತ್ತಾರೆ ಹಿರಿಯರು. ಈ ದಿನ ಪ್ರತಿಯೊಬ್ಬರೂ ಹೊಸ ಬಟ್ಟೆ ತೊಡುವುದು, ಹಣೆಗೆ ತಿಲಕವಿಡುವುದು ಹಾಗೂ ನಿತ್ಯ ಪೂಜೆ ಮಾಡುವುದು ರೂಢಿಯಲ್ಲಿದೆ.
ಒಟ್ಟಾರೆಯಾಗಿ ಯುಗಾದಿಯು ಸಾಂಪ್ರದಾಯಿಕ ಆಚರಣೆಯೊಂದಿಗೆ ಪ್ರಕೃತಿಯೊಂದಿಗೆ
ನಮ್ಮ ಅವಿನಾಭಾವ ಸಂಬಂಧದ ಪ್ರತೀಕವೆಂದರೆ ತಪ್ಪಾಗಲಾರದು. ಆದ್ದರಿಂದ ಈ ಹೊಸತನದ ಹುರುಪನ್ನು ಈ ಯುಗಾದಿಯು ನಮ್ಮಲಿ ತರಲಿ ಎಂದು ಈ ಸಂಭ್ರಮದ ಯುಗಾದಿಯನ್ನು ಸಂತೋಷದಿಂದ ಆಚರಿಸೋಣ.
– ಎಸ್.ಕೆ. ಆಡಿನ.
ಶಿಕ್ಷಕರು, ಹೊಳೆಆಲೂರ.