HomeArt and Literatureಯುಗಾದಿ-ನವ ಸಂವತ್ಸರದ ಮನ್ವಂತರ

ಯುಗಾದಿ-ನವ ಸಂವತ್ಸರದ ಮನ್ವಂತರ

For Dai;y Updates Join Our whatsapp Group

Spread the love

ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. ಯುಗಾದಿಯನ್ನು ಯುಗದ ಆದಿ ಎಂದೂ ಕರೆಯುತ್ತಾರೆ. ಅಂದರೆ `ಹೊಸ ಯುಗದ ಆರಂಭ’ ಎಂದರ್ಥ. ಹಿಂದೂ ಪಂಚಾಂಗದ ಪ್ರಕಾರ, ಪ್ರಸ್ತುತ ಫಾಲ್ಗುಣ ಮಾಸ, ಮಂಗಳಕರವಾದ ನಾಮ ವರ್ಷವು ಮಾರ್ಚ್ 29ರಂದು ಕೊನೆಗೊಳ್ಳುತ್ತದೆ. ಅದಾದ ನಂತರ ಮಾರ್ಚ್ 30ರಿಂದ ಚೈತ್ರ ಮಾಸ ಆರಂಭವಾಗಲಿದೆ. ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಆ ದಿನದಿಂದ `ವಿಶ್ವಾವಸುನಾಮ ಸಂವತ್ಸರ’ ಪ್ರಾರಂಭವಾಗುತ್ತದೆ.

ಪ್ರಾಚೀನ ವೇದಗಳ ಕಾಲದಿಂದಲೂ ಯುಗಾದಿಯ ಮಹಿಮೆಯನ್ನು ಹೇಳಲಾಗಿದೆ. ಎಲ್ಲ ಶಾಸ್ತ್ರ ಗ್ರಂಥಗಳಲ್ಲಿ ಯುಗಾದಿಯ ಕುರಿತು ಹೇಳಲಾಗಿದೆ. ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನ. ಅಲ್ಲದೆ ಮಹಾಭಾರತದಲ್ಲಿ ಬರುವ ಚೀದಿರಾಜ್ಯದ ಅರಸು ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾಲೆಯನ್ನು ಅವನಿಗೆ ಕೊಟ್ಟು, ಚಿನ್ನದ ಕಲಶವುಳ್ಳ ಧ್ವಜವನ್ನು ರಾಜನ ತಲೆಯ ಮೇಲೆ ಇಟ್ಟಿರುವ ದಿನ.

ದಕ್ಷಿಣ ಭಾರತವನ್ನು ಆಳಿದ ಶಾಲಿವಾಹನನು ಚೈತ್ರಶುದ್ಧ ಪಾಡ್ಯಮಿಯಂದು ಶಾಲಿವಾಹನ ರಾಜ ಸಿಂಹಾಸನಾರೂಢನಾದನೆಂದೂ, ಆಗಿನಿಂದ ಶಾಲಿವಾಹನ ಶಕೆ ಆರಂಭವಾಯಿತೆಂದೂ ಹೇಳಲಾಗುತ್ತದೆ. ಹಿಂದುಗಳು ಶಾಲಿವಾಹನ ಶಕೆಯ ಸಂವತ್ಸರಗಳನ್ನಾಧರಿಸಿ ಆಯಾ ಸಂವತ್ಸರವನ್ನು ಚೈತ್ರ ಮಾಸದ ಪ್ರತಿಪದೆಯಿಂದ ಆರಂಭಿಸುವರು. ಅದುವೇ ಯುಗಾದಿಯ ಚಂದ್ರಮಾನದ ಸಂವತ್ಸರದ ಆರಂಭದ ದಿನ.

ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಸೂರ್ಯ ನಮಸ್ಕಾರ, ಪಂಚಾಂಗ ಪೂಜೆ, ಬೇವು-ಬೆಲ್ಲ ಸೇವನೆಗಳೂ ಸೇರಿವೆ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನ ಪದ್ಧತಿ ಮೊದಲಿನಿಂದಲೂ ರೂಢಿಯಲ್ಲಿದೆ.

ಯುಗಾದಿಯ ಸಂದರ್ಭದಲ್ಲಿ ನವ ಉಲ್ಲಾಸ ನೀಡುವ ಭೂಮಿಯಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಪ್ರಕೃತಿಯೂ ಕೂಡ ಹೊಸತನದಿಂದ ತುಂಬಿ ನಲಿಯುತ್ತದೆ. ವಸಂತ ಋತುವಿನ ಪ್ರಾರಂಭ ಕಾಲವಾದ್ದರಿಂದ ಮರಗಳ ಎಲೆಗಳು ಉದುರಿ ಹೊಸ ಚಿಗುರು ಪ್ರಾರಂಭವಾಗುತ್ತದೆ. ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ತಮ್ಮ ತಮ್ಮ ಮನೆ ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡುತ್ತಾರೆ.

ಯುಗಾದಿ ಅನೇಕ ಶುಭ ಕಾರ್ಯಗಳಿಗೆ ನಾಂದಿ ಹಾಡುತ್ತದೆ. ಯುಗಾದಿಯ ದಿನ ಬೇವು-ಬೆಲ್ಲವನ್ನು ತಿಂದು ಬದುಕಿನಲ್ಲಿ ಬರುವ ಸುಖ ಹಾಗೂ ಕಷ್ಟಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸುತ್ತೇವೆ ಎಂದು ಸಂಕಲ್ಪ ಮಾಡುತ್ತೇವೆ. ಯುಗಾದಿ ಹಬ್ಬವನ್ನು ಮಂಗಳಕರ ದಿನವೆಂದು ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ರೈತರು ತಮ್ಮ ಹೊಲಗಳಿಗೆ ತೆರಳಿ ಪೂಜೆ ಸಲ್ಲಿಸಿ, ಇಲ್ಲಿಂದ ಉಳುಮೆ ಮಾಡಲು ಪ್ರಾರಂಭಿಸುತ್ತಾರೆ. ಜೊತೆಗೆ ಜನರು ತಮ್ಮ ಹೊಸ ಮನೆ ನಿರ್ಮಾಣಗಳನ್ನು ಪ್ರಾರಂಭಿಸುತ್ತಾರೆ. ಹೊಸದಾಗಿ ಪ್ರಾರಂಭಿಸಿರುವ ಮನೆಗಳ ಮುಖ್ಯ ಬಾಗಿಲು ನಿಲ್ಲಿಸಿ ಪೂಜೆ ಮಾಡುತ್ತಾರೆ.

ಬೇವು-ಬೆಲ್ಲ ಸೇರಿಸಿ ಸವಿಯುವುದು ಯುಗಾದಿ ದಿನದ ವೈಶಿಷ್ಟ್ಯ. ಈ ದಿನದಲ್ಲಿ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ ಎಂದು ಪ್ರತೀತಿ ಇದೆ.

ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ. ಉತ್ತರಭಾರತದಲ್ಲಿ ಕಾರ್ತಿಕ ಶುದ್ಧ ಪಾಡ್ಯಮಿಯನ್ನು ಯುಗಾದಿಯೆನ್ನುವರು. ಈ ಹಬ್ಬವನ್ನು ಭಾರತದಲ್ಲಿ ಬೇರೆ-ಬೇರೆ ಹೆಸರಿನಿಂದ ಆಚರಿಸುವರು. ಕರ್ನಾಟಕದಲ್ಲಿ `ಯುಗಾದಿ’, ಮಹಾರಾಷ್ಟ್ರದಲ್ಲಿ `ಗುಢಿಪಾಡವಾ’, ಆಂಧ್ರ‍್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ `ಹೊಸ ವರ್ಷದ ಹಬ್ಬ’ವೆಂದು, ಉತ್ತರ ಭಾರತದಲ್ಲಿ ‘ಬೈಸಾಖಿ’ ಎಂದು ಈ ಹಬ್ಬ ಆರಿಸಲ್ಪಡುತ್ತಾರೆ.

ಒಟ್ಟಾರೆಯಾಗಿ ಯುಗಾದಿಯು ಬದುಕಿನ ಎಲ್ಲ ಮಜಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಧೈರ್ಯ ನೀಡುತ್ತದೆ. ಜೀವನದ ಪಯಣದಲ್ಲಿ ಯುಗಾದಿ ಹರುಷ ತರಲಿ. ನೋವುಗಳೆಲ್ಲ ತೊಲಗಲಿ, ಸಂತಸದ ದಿನಗಳು ಬರಲಿ. ಸದಾ ಸುಖ, ಶಾಂತಿ, ಆರೋಗ್ಯ, ನೆಮ್ಮದಿ ತುಂಬಿದ ಬದುಕು ಎಲ್ಲರದ್ದಾಗಲಿ.

– ಬಸವರಾಜ ಎಮ್.ಯರಗುಪ್ಪಿ.

ಬಿಆರ್‌ಪಿ-ಶಿರಹಟ್ಟಿ, ಲಕ್ಷ್ಮೇಶ್ವರ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!