ಕನ್ನಡ ಚಿತ್ರರಂಗದ ಖ್ಯಾತ ನಟ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಯುಐ’ ಇಂದು ಪ್ರಪಂಚದಾದ್ಯಂತ 2,000ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ರಿಲೀಸ್ ಆಗಿದೆ. ಬೆಳ್ಳಂಬೆಳಗ್ಗೆಯೇ ಥಿಯೇಟರ್ ಮುಂದೆ ಉಪ್ಪಿ ಅಭಿಮಾನಿಗಳು ಸಂಭ್ರಮದಿಂದ ಕುಣಿದಾಡಿದ್ದಾರೆ. ಯುಐ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಉಪೇಂದ್ರ ಮತ್ತೆ ತಲೆಗೆ ಹುಳ ಬಿಟ್ಟಿದ್ದಾರೆ.
ಒಂಬತ್ತು ವರ್ಷಗಳ ನಂತರ ಬುದ್ಧಿವಂತ ನಿರ್ದೇಶಕ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ಕನ್ನಡ ಸೇರಿ ಐದು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಕಳೆದ ರಾತ್ರಿಯಿಂದಲೇ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ. ಚಿತ್ರಮಂದಿರಗಳ ಬಳಿ ಅಭಿಮಾನಿಗಳು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ್ದು, ಫೋಟೋ ವಿಡಿಯೋಗಳು ವೈರಲ್ ಆಗಿದೆ.
ಯುಐ ಸಿನಿಮಾ ರಿಲೀಸ್ ಸಂಭ್ರಮದ ನಡುವೆ ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಅವರ ಫೋಟೋ ಇಟ್ಟು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. UI ರಿಲೀಸ್ ಸಮಯದಲ್ಲೇ ಸಂತೋಷ್ ಥಿಯೇಟರ್ ಮುಂದೆ ಅಭಿಮಾನಿ ಒಬ್ಬರು ಶಿವಣ್ಣ ಸರ್ಜರಿ ಬಳಿಕ ಆರೋಗ್ಯವಾಗಿ ಭಾರತಕ್ಕೆ ಹಿಂದಿರುಗಲಿ ಎಂದು ಪೂಜೆ ಮಾಡಿಸಿದ್ದಾರೆ. ಚಿತ್ರಮಂದಿರದ ಮುಂದೆ ಶಿವಣ್ಣ, ಉಪೇಂದ್ರ ಅವರ ಫೋಟೋಗಳನ್ನಿಟ್ಟು ಹೋಮ ಮಾಡಿದ್ದಾರೆ. ಮೂವರು ಪೂಜಾರಿಗಳು ಹೋಮ ಕುಂಡಕ್ಕೆ ತುಪ್ಪ ಸುರಿದು ಮಂತ್ರ ಪಠಿಸಿ ಪೂಜೆ ಸಲ್ಲಿಸಿದ್ದಾರೆ.