ಶಿವಮೊಗ್ಗ:- ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಪೊಲೀಸಪ್ಪನ ಕಾಟ ತಾಳಲಾರದೆ ವಿಧವೆ ಮಹಿಳೆ ವಾಟ್ಸಾಪ್ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಸ್ವಾತಿ ಎಂದು ಗುರುತಿಸಲಾಗಿದೆ. ಇನ್ನು ತಂದೆ ಮತ್ತು ತಾಯಿ ಸಾವಿನಿಂದ ಹೆಣ್ಣು ಮಕ್ಕಳ್ಳಿಬ್ಬರು ಅನಾಥವಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಮೃತಳ ಹೆತ್ತವರು ಟಾರ್ಚರ್ ಕೊಟ್ಟ ಪೋಲಿಸ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮೃತ ಸ್ವಾತಿಗೆ 7 ವರ್ಷಗಳ ಹಿಂದೆ ಮದುವೆಯಾಗಿತ್ತು. ಒಂದು ವಾರದ ಹಿಂದಷ್ಟೇ ಪತಿ ಜಗದೀಶ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಪೊಲೀಸ್ ಮೋಹನ್, ಸ್ವಾತಿಗೆ ಫೇಸ್ಬುಕ್ನಲ್ಲಿ ಮೆಸೇಜ್ ಮಾಡಿದ್ದ. ಆತನ ಅಕೌಂಟ್ ಅನ್ನು ಸ್ವಾತಿ ಬ್ಲಾಕ್ ಮಾಡಿದ್ದರು. ಇದಕ್ಕೆ ಕೋಪಗೊಂಡ ಪೋಲಿಸ್ ಬೇರೆ ಅಕೌಂಟ್ ನಿಂದ ಸ್ವಾತಿ ಬಗ್ಗೆ ಅಪಪ್ರಚಾರ ಮಾಡಿದ್ದ. ಬಳಿಕ ಈತನ ಕಾಟ ತಾಳಲಾರದೆ ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಡೆತ್ ನೋಟ್ ನಲ್ಲಿ ಏನಿದೆ?
ಅಮ್ಮ ದಯವಿಟ್ಟು ಕ್ಷಮಿಸಿ. ನನ್ನ ಬಗ್ಗೆ ಇಲ್ಲಸಲ್ಲದ ಹಾಗೆ ಮೋಹನ್ ಅಪಪ್ರಚಾರ ಮಾಡಿದ್ದಾರೆ. ನನಗೆ ತಡಿಯುವುದಕ್ಕೆ ಆಗುತ್ತಿಲ್ಲ. ನನ್ನ ಗಂಡ ಸತ್ತಿದು ಫುಲ್ ಡ್ರಿಂಕ್ಸ್ ಮಾಡಿ. ಈ ಮೋಹನ್ ಎನ್ನುವ ಪೊಲೀಸ್ ನನ್ನ ಬಗ್ಗೆ ಜನಗಳ ಹತ್ತಿರ ಏನೇನೋ ಹೇಳಿರುವುದು ನನಗೆ ಈಗ ಬೆಳಿಗ್ಗೆ ವಿಷಯ ಗೊತಾಯ್ತು. ಅವನನ್ನು ಮಾತ್ರ ಸಮ್ಮನೇ ಬಿಡಬೇಡಿ ಎಂದಿದ್ದಾರೆ.
ಅವರು ಯಾರು ಅಂತಾನೆ ನಂಗೆ ಗೊತ್ತಿಲ್ಲ. ಫೇಸ್ಬುಕ್ನಲ್ಲಿ ಮೆಸೇಜ್ ಮಾಡಿದ್ದರು. ನಾನು ಬ್ಲಾಕ್ ಮಾಡಿದೆ. ಅದೇ ಸಿಟ್ಟಿಗೆ ಏನೇನೋ ಹೇಳಿದ್ದಾರೆ. ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ. ದಯವಿಟ್ಟು ಸ್ವಾರಿ ಅಮ್ಮ ಎಂದು ಬರೆದಿದ್ದಾರೆ.



