ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪ್ರಮುಖ ಬಜಾರ ರಸ್ತೆ ಚಾವಡಿಯಿಂದ ಭರಮದೇವರ ಸರ್ಕಲ್‌ವರೆಗಿನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸುವಂತೆ ಶುಕ್ರವಾರ ವ್ಯಾಪಾರಸ್ಥರು, ಸಾರ್ವಜನಿಕರು ಪುರಸಭೆಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವ್ಯಾಪಾರಸ್ಥ ರವಿ ಪುರಾಣಿಕಮಠ, ಪುರಸಭೆ 15ನೇ ಹಣಕಾಸಿನ 76 ಲಕ್ಷ ರೂ ಅನುದಾನದಲ್ಲಿ ಮುಖ್ಯ ಬಜಾರ್ ರಸ್ತೆಯ ಗ್ರಾಮ ಚಾವಡಿಯಿಂದ ಭರಮದೇವರ ಸರ್ಕಲ್‌ವರೆಗಿನ 260 ಮೀಟರ್ ರಸ್ತೆ ಅಭಿವೃದ್ಧಿ (ಸಿಸಿ) ಕಾಮಗಾರಿಯನ್ನು 3 ತಿಂಗಳ ಹಿಂದೆಯೇ ಪ್ರಾರಂಭಿಸಲಾಗಿದೆ. ಆದರೆ ಕಾಮಗಾರಿಗಾಗಿ ರಸ್ತೆ ಅಗೆದು ಬಿಟ್ಟಿದ್ದರಿಂದ ಮತ್ತು ಇದೀಗ ರಸ್ತೆ ಮಧ್ಯದಲ್ಲಿನ ರಾಜಕಾಲುವೆ ಕುಸಿದು ರಸ್ತೆ ಸಂಚಾರ ಬಂದ್ ಆಗಿದೆ. ಈ ಮಾರ್ಗವಾಗಿಯೇ ದೂದಪೀರಾಂ ದರ್ಗಾ, ಕೋರ್ಟ್, ತಹಸೀಲ್ದಾರ್ ಕಚೇರಿ, ಶಾಲೆ ಸೇರಿ ನಿತ್ಯ ಕಾರ್ಯಕ್ಕೆ ಹೋಗಲು ರಸ್ತೆ ಇಲ್ಲದಂತಾಗಿದೆ.
ರೈತರು, ವ್ಯಾಪಾರಸ್ಥರು, ಜನಸಾಮಾನ್ಯರು, ಶಾಲಾ ಮಕ್ಕಳು, ರೋಗಿಗಳು, ವೃದ್ಧರು, ಅಟೋ ಚಾಲಕರ ಪರಿಸ್ಥಿತಿ ಹೇಳತೀರದಾಗಿದೆ. ಮಳೆಗಾಲವಾಗಿದ್ದರಿಂದ ಜನರು ನರಕಯಾತನೆ ಅನುಭವಿಸುತ್ತಾ ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಗುಣಮಟ್ಟದ ಕಾಮಗಾರಿಗಾಗಿ ಹೋರಾಟ ನಡೆದರೂ ಯಾವುದೇ ಪ್ರಯೋಜವಾಗಿಲ್ಲ. ಶುಕ್ರವಾರದ ಸಂತೆ ದಿನವಂತೂ ಹೊರಗಿನಿಂದ ಬರುವ ಬೀದಿಬದಿ ವ್ಯಾಪಾರಸ್ಥರು ಎಲ್ಲೆಂದರಲ್ಲಿ ಅಂಗಡಿ ಹಚ್ಚುತ್ತಿದ್ದಾರೆ. ಇದರಿಂದಾಗಿ ಉಳಿದ ವ್ಯಾಪಾರಸ್ಥರಿಗೆ ತೊಂದರೆ ಆಗುತ್ತಿದೆ. ಶೀಘ್ರವೇ ರಸ್ತೆ ಕೆಲಸ ಮುಗಿಸಬೇಕು. ಇಲ್ಲದಿದ್ದರೆ ಬಜಾರದಲ್ಲೇ ರಸ್ತೆ ತಡೆ, ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಅಣ್ಣಪ್ಪ ಸಂಶಿ, ಮಲೀಕ, ದಾದಾಪೀರ ಸೇರಿ ಬಜಾರ್ ವ್ಯಾಪಾರಸ್ಥರು ಇದ್ದರು.



