ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಕ್ರೀಡಾ ಹಾಗೂ ಮೂಲಸೌಕರ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ ಎಂದು ಕ್ರಾಂತಿಸೂರ್ಯ ಜೈಭೀಮ್ ಸೇನೆಯ ರಾಜ್ಯಾಧ್ಯಕ್ಷ ಮಂಜುನಾಥ ಎಸ್. ರಾಠೋಡ ಅಭಿಪ್ರಾಯಪಟ್ಟಿದ್ದಾರೆ.
ಆರೋಗ್ಯ ಮತ್ತು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಟಿಸಿಎಸ್ ದರವನ್ನು ಶೇ. 5ರಿಂದ ಶೇ. 2ಕ್ಕೆ ಇಳಿಸಿರುವುದು ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಮಹತ್ವದ ನಿರ್ಣಯವಾಗಿದೆ. ವಿದೇಶ ಯಾತ್ರೆಗಳ ಮೇಲಿನ ಟಿಸಿಎಸ್ ಕಡಿತ, ಅನಿವಾಸಿ ಭಾರತೀಯರ ಸ್ಥಿರಾಸ್ತಿಗೆ ಸಂಬಂಧಿಸಿದ ಟಿಡಿಎಸ್ ಸರಳೀಕರಣ ಹೂಡಿಕೆ ಉತ್ತೇಜನಕ್ಕೆ ಸಹಕಾರಿ ಆಗಲಿದೆ.
ಆದಾಯ ತೆರಿಗೆ ನಿಯಮಗಳ ಸರಳೀಕರಣ, ಫಾರ್ಮ್ಗಳ ಸುಲಭೀಕರಣ, ಸಣ್ಣ ತೆರಿಗೆ ಪಾವತಿದಾರರಿಗೆ ಹೊಸ ವ್ಯವಸ್ಥೆ, ಅಪಘಾತ ವಿಮೆ ಪರಿಹಾರಕ್ಕೆ ತೆರಿಗೆ ವಿನಾಯಿತಿ ಮತ್ತು ವಿದೇಶಿ ಆಸ್ತಿ ಘೋಷಣೆಗೆ ಆರು ತಿಂಗಳ ಸಮಯಾವಕಾಶ ನೀಡಿರುವುದು ಜನಪರ ನಿರ್ಧಾರಗಳಾಗಿವೆ.
ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ರಾಜ್ಯಗಳಿಗೆ ಯುನಿವರ್ಸಿಟಿ ಟೌನ್ಶಿಪ್ಗಳು, ಪ್ರತೀ ಜಿಲ್ಲೆಗೆ ವಿದ್ಯಾರ್ಥಿನಿ ನಿಲಯ, ಸ್ಕಿಲ್ ಸೆಂಟರ್ಗಳ ನಿರ್ಮಾಣ, ರಾಷ್ಟ್ರೀಯ ಹಾಸ್ಪಿಟಾಲಿಟಿ ಸಂಸ್ಥೆಯ ಸ್ಥಾಪನೆ, ಈಶಾನ್ಯ ಭಾರತದಲ್ಲಿ ಏಮ್ಸ್ ಆಸ್ಪತ್ರೆ ನಿರ್ಮಾಣ ಘೋಷಣೆಗಳು ಭವಿಷ್ಯದ ಭಾರತ ನಿರ್ಮಾಣಕ್ಕೆ ದಾರಿ ತೋರಿಸುತ್ತವೆ.
ಒಟ್ಟಾರೆ, ಈ ಘೋಷಣೆಗಳು ಸಾಮಾಜಿಕ ನ್ಯಾಯ, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದ್ದಾರೆ.



