ನವದೆಹಲಿ: 2026-27ರ ಆರ್ಥಿಕ ವರ್ಷದ ಕೇಂದ್ರ ಬಜೆಟ್ ಮಂಡಿಸಲು ಕೇಂದ್ರ ಸರ್ಕಾರ ಸಿದ್ದತೆ ನಡೆಸಿದೆ.
ಇಂದಿನಿಂದ ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಅಧಿವೇಶನವು ಆರಂಭವಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿ ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ. ಅಧಿವೇಶನವು ಎರಡು ಹಂತಗಳಲ್ಲಿ ನಡೆಯಲಿದೆ. ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಅವರ ಬಜೆಟ್ ಮಂಡನೆಯೊಂದಿಗೆ ಫೆಬ್ರವರಿ 13 ರವರೆಗೆ ಮೊದಲ ಹಂತದ ಅಧಿವೇಶನ ನಡೆಯಲಿದೆ.
ಬಳಿಕ ಮಾರ್ಚ್ 9ರಿಂದ ಏಪ್ರಿಲ್ 2ರವರೆಗೆ ಎರಡನೇ ಹಂತದ ಅಧಿವೇಶನ ನಡೆಯಲಿದೆ. ಎರಡನೇ ಹಂತದ ವೇಳೆ ಬಜೆಟ್ ಕುರಿತು ಗಂಭೀರ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಅಧಿವೇಶನದ ಸಮಯದಲ್ಲಿ ಮನರೇಗಾ ಮತ್ತು ಎಸ್ಐಆರ್ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ವಿರೋಧ ಪಕ್ಷಗಳು ಸಜ್ಜಾಗಿವೆ ಎಂದು ವರದಿಯಾಗಿದೆ.
ದೇಶಾದ್ಯಂತ ಮನರೇಗಾ ಬದಲಾವಣೆಗೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಸಂಸದರು, ‘ಕಾಂಗ್ರೆಸ್ ಸಂಸದೀಯ ಸಮಿತಿ’ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ.



