ಮೈಸೂರು: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದರು. ಮೈಸೂರಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಪ್ರಧಾನ್ ಅವರು ಬೆಳಗಿನ ಉಪಹಾರ ಸೇವಿಸಿದರು. ಇನ್ನೂ ಈ ಭೇಟಿ ಕೆಎಸ್‌ಒಯುನಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.
ಸುತ್ತೂರು ಮಠ ಧಾರ್ಮಿಕ, ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡುತ್ತಿದ್ದು, ಮಠದ ಶೈಕ್ಷಣಿಕ ಸಂಸ್ಥೆಗಳು ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಮೈಸೂರಿನಲ್ಲಿ ಮಠವು ಒಂದು ವೈದ್ಯಕೀಯ ಕಾಲೇಜು, ಒಂದು ದಂತ ವೈದ್ಯಕೀಯ ಕಾಲೇಜು ಮತ್ತು ಎರಡು ಔಷಧ ವಿಜ್ಞಾನ ಕಾಲೇಜುಗಳನ್ನು ನಡೆಸುತ್ತಿದೆ. ಇನ್ನು ನೋಯ್ಡಾ ಮತ್ತು ಜಮ್ಮುವಿನಲ್ಲಿಯೂ ಮಠವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ.
ಜಮ್ಮುವಿನಲ್ಲಿ ಆರಂಭವಾದ ಔಷಧ ವಿಜ್ಞಾನ ಕಾಲೇಜು ಈಗ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸುತ್ತೂರು ಮಠದ ಔಷಧ ವಿಜ್ಞಾನ ಕಾರ್ಯಕ್ರಮಗಳು ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಚೌಕಟ್ಟಿನಲ್ಲಿ (NIRF) ನಿರಂತರವಾಗಿ ಉನ್ನತ ಸ್ಥಾನಗಳನ್ನು ಪಡೆದಿವೆ.
ಮಠವು ಸ್ಥಳೀಯ ತಾಯ್ನುಡಿಗಳ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದ್ದು, ದೇಶದಾದ್ಯಂತ 200ಕ್ಕೂ ಹೆಚ್ಚು ಸ್ಥಳೀಯ ತಾಯ್ನುಡಿಗಳ ಅಭಿವೃದ್ದಿ ಮತ್ತು ಪ್ರಚಾರದಲ್ಲಿ ಕಾರ್ಯೋನ್ಮುಖವಾಗಿದೆ. ತಾಯ್ನುಡಿಗಳ ಅಭಿವೃದ್ಧಿ, ಉನ್ನತ ಶಿಕ್ಷಣ, ಯೋಗ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಮಠದ ಕೊಡುಗೆ ಮೆಚ್ಚುಗೆಗೆ ಪಾತ್ರವಾಗಿದೆ.



