ಮಂಡ್ಯ: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಎರಡು ವರ್ಷದ ಮಗುವಿನ ಚಿಕಿತ್ಸೆಗೆ ನೆರವು ನೀಡುವಂತೆ ಪೋಷಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಶಿವಾರ ಗ್ರಾಮದ ಸಾಯಿ ಚಿರಾಗ್ (2) ಎಂಬ ಮಗು ಎಸ್‌ಎಂಎ (Spinal Muscular Atrophy) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ.
ಮಗುವಿನ ಪೋಷಕರಾದ ಚೇತನ್ ಹಾಗೂ ಭಾರ್ಗವಿ ದಂಪತಿ ಮಂಡ್ಯದ ವಿಸಿ ಫಾರಂನಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮಗುವಿನ ಚಿಕಿತ್ಸೆಗೆ ಸುಮಾರು 16 ಕೋಟಿ ರೂ. ಅಗತ್ಯವಿದ್ದು, ವಿದೇಶಗಳಿಂದ ಸುಮಾರು 1.75 ಕೋಟಿ ರೂ. ನೆರವು ಸಿಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವಂತೆ ಪೋಷಕರು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಾಲಕನ ಚಿಕಿತ್ಸೆಗೆ ಸಾಧ್ಯವಾದಷ್ಟು ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಪ್ರಧಾನಮಂತ್ರಿ ಪರಿಹಾರ ನಿಧಿ ಮೂಲಕ ಸಹಾಯ ದೊರಕುವಂತೆ ಪ್ರಯತ್ನಿಸುವುದಾಗಿ ಹಾಗೂ ವೈಯಕ್ತಿಕವಾಗಿಯೂ ನೆರವು ನೀಡುವುದಾಗಿ ತಿಳಿಸಿದ್ದಾರೆ.



