ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದಸರಾ ಹಬ್ಬದ ನಿಮಿತ್ತ ಲಕ್ಷ್ಮೇಶ್ವರದಲ್ಲಿ ಶಿರಹಟ್ಟಿ ಮತಕ್ಷೇತ್ರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಗುರುನಾಥ ದಾನಪ್ಪನವರ ಅವರ ನೇತೃತ್ವದಲ್ಲಿ ದುರ್ಗಾದೌಡ ಎನ್ನುವ ಧಾರ್ಮಿಕ ನಡಿಗೆ ವಿಶಿಷ್ಟ ಕಾರ್ಯಕ್ರಮ ಅತ್ಯಂತ ಶೃದ್ಧಾ ಭಕ್ತಿಯಿಂದ ನೆರವೇರುತ್ತಿದೆ.
ಭಗವಾಧ್ವಜ ಮತ್ತು ದೇವಿಯ ಆಯುಧ ತ್ರಿಶೂಲ, ದೇವತೆಗಳ ವೇಷಭೂಷಣ ಧರಿಸಿದ ಹೆಣ್ಣು ಮಕ್ಕಳು, ಧರ್ಮ ಘೋಷ ಮೊಳಗಿಸುವ ಮೂಲಕ ನೂರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ನಿತ್ಯ ಬೆಳಗಿನ ಜಾವ ನಡೆಯುತ್ತಿದೆ. ಪ್ರತಿಯೊಬ್ಬರೂ ಕೇಸರಿ ಧ್ವಜ ಹಿಡಿದು, ಶಾಲು ಹಾಕಿಕೊಂಡು ಸಾಗಿದರು. ದಾರಿ ಮಧ್ಯೆ ಭಕ್ತರು ತಮ್ಮ ಮನೆಯ ಮುಂದೆ ರಂಗೋಲಿ ಹಾಕಿ, ಪುಷ್ಪ ವೃಷ್ಠಿಯೊಂದಿಗೆ ಮೆರವಣಿಗೆಯನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ರೂವಾರಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಗುರುನಾಥ ದಾನಪ್ಪನವರ, ಪ್ರಸ್ತುತ ದಿನಮಾನಗಳಲ್ಲಿ ಸಮಾಜದಲ್ಲಿ ಧಾರ್ಮಿಕ ಮೌಲ್ಯ ಹೆಚ್ಚಿಸುವದು, ಧರ್ಮ ಜಾಗೃತಿ, ಧಾರ್ಮಿಕ ಕಲ್ಪನೆಗಳನ್ನು ಉಳಿಸಬೇಕು ಎನ್ನುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ನವರಾತ್ರಿಯ 9 ದಿನಗಳ ಪುಣ್ಯಕಾಲದಲ್ಲಿ ದೇವತೆಗಳನ್ನು ಪೂಜಿಸುವುದು ಹಬ್ಬದ ವಿಶೇಷವಾಗಿದೆ. ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ಧಾರ್ಮಿಕ ಆಚರಣೆಗಳಿಂದ ಧರ್ಮದ ತಳಹದಿಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಕಳೆದ 4 ವರ್ಷಗಳಿಂದ ಈ ಕಾರ್ಯಕ್ರಮದಲ್ಲಿ ಎಲ್ಲರೂ ಸಮಾನತೆಯಿಂದ ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸಗಳನ್ನು ಯುವ ಪೀಳಿಗೆಗೂ ಪರಿಚಯಸಲು ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ ಎಂದರು.
ಜಿಟಿ ಜಿಟಿ ಮಳೆಯ ನಡುವೆಯೂ ದುರ್ಗಾದೌಡ ಬರುವ ಮಾರ್ಗದಲ್ಲಿ ಮಹಿಳೆಯರು ರಂಗೋಲಿ ಹಾಕಿ, ಪುಷ್ಪಗಳಿಂದ ಅಲಂಕರಿಸಿ ಸ್ವಾಗತಿಸಿದರು.
ಈ ವೇಳೆ ಬಸವೇಶ ಮಹಾಂತಶೆಟ್ಟರ, ಗುರಣ್ಣ ಪಾಟೀಲ ಕುಲಕರ್ಣಿ, ತಿಪ್ಪಣ್ಣ ಸಂಶಿ, ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ, ವಾಣಿ ಹತ್ತಿ, ಸೋಮೇಶ ಉಪನಾಳ, ಪುಲಿಕೇಶಿ ಬಟ್ಟೂರ, ನೀಲಪ್ಪ ಹತ್ತಿ, ರಾಜಣ್ಣ ಅರಳಿ, ಮಲ್ಲನಗೌಡ ಪಾಟೀಲ, ಆನಂದಲಿಂಗ ಶೆಟ್ಟಿ, ಶಿವಜೋಗೆಪ್ಪ ಚಂದರಗಿ, ಗಂಗಪ್ಪ ಗಿಡಿಬಿಡಿ, ಮಹಾದೇವ ಗಿಡಿಬಿಡಿ, ರವಿ ಲಿಂಗಶೆಟ್ಟಿ, ನಿಂಗನಗೌಡ ಪಾಟೀಲ, ರಾಘವೇಂದ್ರ ಪೂಜಾರ, ಮಂಜಯ್ಯ ಕಲಕೇರಿ ಮಠ, ರಾಜಶೇಖರಯ್ಯ ಶಿಗ್ಲಿಮಠ, ಜ್ಞಾನೋಭ ಬೊಮಲೆ, ಶಿವಣ್ಣ ಗಿಡಿಬಿಡಿ, ಈರಣ್ಣ ಹಾದಿಮನಿ ಸೇರಿದಂತೆ ಮಹಿಳೆಯರು, ಮಕ್ಕಳು, ಕದರಗೇರಿ ಓಣಿಯ ಶಿವರುದ್ರಮ್ಮ ದೇವಸ್ಥಾನ ಕಮಿಟಿಯವರು ಇದ್ದರು.
ಶನಿವಾರ, 6ನೇ ದಿನದ ದುರ್ಗಾದೌಡ ಧರ್ಮ ಜಾಗೃತಿ ಮೆರವಣಿಗೆ ಪಟ್ಟಣದ ಬಸ್ತಿಬಣದ ಬನಶಂಕರಿ ದೇವಸ್ಥಾನದಿಂದ ಪ್ರಾರಂಭವಾಗಿ ಮಾರ್ಗದಲ್ಲಿ ಬಸವಣ್ಣನ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಆಂಜನೇಯ, ವಿಠೋಭ ರುಕ್ಮಾಯಿ, ಮೈಲಾರಲಿಂಗೇಶ್ವರ ದೇವಸ್ಥಾನ, ಸಣ್ಣ ದ್ಯಾಮವ್ವ, ಈಶ್ವರ, ವೀರಭದ್ರೇಶ್ವರ, ಪರ್ವತಮಲ್ಲಯ್ಯ, ಜೋಡ ಮಾರುತಿ, ಗೊಲ್ಲಾಳೇಶ್ವರ, ಗೌರಮ್ಮದೇವಿ, ಕಲ್ಮಠ, ದುರ್ಗವ್ವ-ದ್ಯಾಮವ್ವ ದೇವಸ್ಥಾನಗಳ ದರ್ಶನ ಪಡೆದು ಕದರಗಿರಿ ಓಣಿಯ ಶ್ರೀ ಶಿವರುದ್ರಮ್ಮ ದೇವಸ್ಥಾನದಲ್ಲಿ ಧರ್ಮದ ನಡಿಗೆ ಸಂಪನ್ನಗೊಂಡಿತು.


