ವಿಕ ಸುದ್ದಿಲೋಕ ಗದಗ: ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಜನಗಣತಿಯು ಸಮಾಜದಲ್ಲಿ ಗೊಂದಲ ಮೂಡಿಸುತ್ತಿದೆ. ಈ ಗೊಂದಲಗಳ ವಿರುದ್ಧ ಹೋರಾಟ ನಡೆಸುವ ಭಾಗವಾಗಿ ವೀರಶೈವ, ಲಿಂಗಾಯತ ಮಹಾಸಭಾದ ವತಿಯಿಂದ ಸೆಪ್ಟೆಂಬರ್ 19ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಏಕತಾ ಸಮಾವೇಶ’ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ರಾಜು ಗುಡಿಮನಿ ತಿಳಿಸಿದರು. ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆಯ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ’ ಎಂದು ನಮೂದಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಈ ವಿಷಯವನ್ನು ಸಮಾವೇಶದ ಮೂಲಕ ಎಲ್ಲರಿಗೂ ತಿಳಿಸಲಾಗುವುದು ಎಂದರು.
ಹುಬ್ಬಳ್ಳಿಯಲ್ಲಿ ನಡೆಯುವ ಸಮಾವೇಶದಲ್ಲಿ ಗದಗ ಜಿಲ್ಲೆಯಿಂದ ಸುಮಾರು 15 ಸಾವಿರ ಜನ ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಸಾಕಷ್ಟು ಭಕ್ತರು ಸ್ವಂತ ವಾಹನಗಳಲ್ಲಿಯೂ ತೆರಳಲಿದ್ದಾರೆ ಎಂದು ಹೇಳಿದರು.
ಹೊಸಳ್ಳಿ ಬೂದೀಶ್ವರ ಮಠದ ಅಭಿನವ ಬೂದೀಶ್ವರ ಶ್ರೀಗಳು ಮಾತನಾಡಿ, ಸರ್ಕಾರ ಜಾತಿಗಳ ಆಧಾರದ ಮೇಲೆ ಉಪಜಾತಿಗಳನ್ನು ಸೃಷ್ಟಿಸುತ್ತಿರುವುದು ನೋವಿನ ಸಂಗತಿ. ಸರ್ಕಾರದ ಈ ಕ್ರಮವನ್ನು ನಾವು ಖಂಡಿಸುತ್ತೇವೆ. ಜಾತಿ ಗಣತಿಯ ವಿರುದ್ಧ ನಡೆಯುತ್ತಿರುವ ‘ವೀರಶೈವ ಏಕತಾ ಸಮಾವೇಶ’ ಒಂದು ಐತಿಹಾಸಿಕ ನಿರ್ಣಯವಾಗಲಿದೆ. ಲಿಂಗಾಯತ ಮತ್ತು ವೀರಶೈವ ಬೇರೆ ಎಂಬ ಗೊಂದಲ ಸೃಷ್ಟಿಸಲಾಗುತ್ತಿದೆ. ಇದಕ್ಕೆ ಭಕ್ತರು ಅವಕಾಶ ಕೊಡಬಾರದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಮುರುಘರಾಜ ಬಡ್ನಿ, ರಾಜ್ಯ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಮಾನ್ವಿ, ವಿಜಯಕುಮಾರ ಗಡ್ಡಿ, ಬಸವರಾಜ ಅಂಗಡಿ, ಸುರೇಖಾ ಪಿಳ್ಳಿ ಮುಂತಾದವರು ಉಪಸ್ಥಿತರಿದ್ದರು.