ವಿಜಯಸಾಕ್ಷಿ ಸುದ್ದಿ, ಗದಗ: ವೀರಶೈವ–ಲಿಂಗಾಯತ ಸಮಾಜದ ಶಕ್ತಿ ಅಪಾರವಾಗಿದ್ದು, ಸಮಾಜದ ವಿವಿಧ ಸಂಘಟನೆಗಳು ಪರಸ್ಪರ ಸಹಕಾರ, ಸೌಹಾರ್ದತೆ ಹಾಗೂ ಸಮನ್ವಯದಿಂದ ಒಂದಾಗಿ ಕಾರ್ಯನಿರ್ವಹಿಸಿದರೆ ಸಮಾಜದ ಅಭ್ಯುದಯಕ್ಕೆ ಹೊಸ ದಿಕ್ಕು ದೊರೆಯಲಿದೆ ಎಂದು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಶ್ರೀ ಶ್ರೀ 1008 ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಗದಗ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ‘ಶ್ರೀ ಶಿವರಂಭಾಪುರೀಶ್ವರ ಸಭಾಂಗಣ’ವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದ ಅವರು, ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಧ್ಯೇಯದೊಂದಿಗೆ ನಿರ್ಮಿಸಿರುವ ಈ ಸಭಾಂಗಣ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಚಟುವಟಿಕೆಗಳ ಕೇಂದ್ರವಾಗಿ ಸಮಾಜದಲ್ಲಿ ಏಕತೆ ಮತ್ತು ಸದ್ಭಾವನೆ ಬೆಳೆಸಲಿ ಎಂದು ಹಾರೈಸಿದರು.
ಸಭಾಂಗಣ ನಿರ್ಮಾಣದ ಹಿನ್ನೆಲೆಯನ್ನು ವಿವರಿಸಿದ ಶ್ರೀಗಳು, 1975-76ರಲ್ಲಿ ತ್ರಿಕಾಲ ವಂದನೀಯ ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಮಾಜಿ ಸಚಿವ ಕೆ.ಎಚ್. ಪಾಟೀಲ ಅವರ ಸಹಕಾರದಿಂದ ಮಾಂಗಲ್ಯ ಮಂದಿರಕ್ಕೆ ಅಡಿಗಲ್ಲು ಹಾಕಲಾಗಿತ್ತು. ಬಳಿಕ ಕಾಮಗಾರಿ ಸ್ಥಗಿತಗೊಂಡಿದ್ದರೂ, 1992ರಲ್ಲಿ ಪೀಠಾರೋಹಣದ ನಂತರ ಭಕ್ತರ ಸಹಕಾರದಿಂದ ಮತ್ತೆ ಆರಂಭಗೊಂಡಿತು ಎಂದು ತಿಳಿಸಿದರು.
ಬಸಣ್ಣ ಮಲ್ಲಾಡದ ಅವರ ಮುಂದಾಳತ್ವದಲ್ಲಿ ಸುಮಾರು ಒಂದೂವರೆ ವರ್ಷದಲ್ಲಿ 75 ಲಕ್ಷದಿಂದ 1 ಕೋಟಿ ರೂಪಾಯಿ ವೆಚ್ಚದಲ್ಲಿ ಮಾಂಗಲ್ಯ ಮಂದಿರ ನಿರ್ಮಾಣಗೊಂಡಿದ್ದು, ಇದೀಗ ಭಕ್ತರ ಅನುಕೂಲಕ್ಕಾಗಿ ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ‘ಶ್ರೀ ಶಿವರಂಭಾಪುರೀಶ್ವರ ಸಭಾಂಗಣ’ ನಿರ್ಮಿಸಲಾಗಿದೆ ಎಂದು ಹೇಳಿದರು. ವೀರಗಂಗಾಧರ ಜಗದ್ಗುರುಗಳ ಕಾವ್ಯನಾಮ ‘ಶಿವರಂಭಾಪುರಿ’ ಆಧರಿಸಿ ಸಭಾಂಗಣಕ್ಕೆ ಈ ಹೆಸರು ನಾಮಕರಣ ಮಾಡಲಾಗಿದೆ ಎಂದರು.
ಮಾರ್ಕೆಟ್ ಸಮಿತಿಯಿಂದ ಪಡೆದ 30×120 ಅಡಿ ಜಾಗದಲ್ಲಿ ಆಧುನಿಕ ಸೌಲಭ್ಯಗಳಿರುವ ಕೊಠಡಿಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು, ಅದರ ಜವಾಬ್ದಾರಿಯನ್ನು ಇಂಜಿನಿಯರ್ ಅಮರನಾಥ ಸೋಮಣ್ಣ ಮಲ್ಲಾಡದ ಅವರಿಗೆ ವಹಿಸಲಾಗುವುದು ಎಂದು ತಿಳಿಸಿದರು.
ವೀರಶೈವ–ಲಿಂಗಾಯತ ಸಮಾಜದಲ್ಲಿರುವ ಶಕ್ತಿಯನ್ನು ವಿಭಜಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅಂತಹ ಪ್ರಯತ್ನಗಳಿಗೆ ಅವಕಾಶ ನೀಡದೆ ಎಲ್ಲ ಸಂಘಟನೆಗಳು ಮುಷ್ಟಿಯಂತೆ ಒಂದಾಗಿ ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸಬೇಕು. ಪಂಚಪೀಠಗಳ ವಿಚಾರದಲ್ಲೂ ಭಕ್ತರು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮೂಲ ವಾಹಿನಿಯಲ್ಲಿ ಒಂದಾಗಿ ಸಮಾಜದ ಶ್ರೇಯಸ್ಸಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಕಾಶಿ ಪೀಠದ ನೂತನ ಜಗದ್ಗುರುಗಳು ಆಷಾಢ ಮಾಸದ ವಿಶೇಷ ಪೂಜೆಯನ್ನು ಇದೇ ಮಾಂಗಲ್ಯ ಮಂದಿರದಲ್ಲಿ ಐದು ದಿನಗಳ ಕಾಲ ನೆರವೇರಿಸಲಿದ್ದು, ಮದುವೆ ಕಾರ್ಯಕ್ರಮಗಳಿಲ್ಲದ ದಿನಗಳಲ್ಲಿ ಪಂಚಪೀಠಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಮಂದಿರವನ್ನು ಮೀಸಲಿಡಲಾಗುವುದು ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಸುಳ್ಳದ ಪಂಚಗ್ರಹ ಮಠದ ಪೂಜ್ಯ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ನರಸಾಪುರ–ಕದಾಂಪೂರದ ಪೂಜ್ಯ ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಡಾ. ರಾಜಗುರು ಗುರುಸ್ವಾಮಿ ಕಲಕೇರಿ, ದುಂಡಪ್ಪ ಮಲ್ಲಾಡದ, ಬಸವಣ್ಣೆಪ್ಪ ಪುರದ, ಚಂದ್ರು ಬಾಳಿಹಳ್ಳಿಮಠ, ರಾಜಣ್ಣ ಮಲ್ಲಾಡದ, ಮಂಜುನಾಥ ಬೇಲೇರಿ, ಮಂಜುನಾಥ ಅಬ್ಬಿಗೇರಿ, ಡಾ. ಶ್ರೀಶೈಲಪ್ಪ ಮಲ್ಲಾಡದ, ಸುರೇಶ ಅಬ್ಬಿಗೇರಿ, ಅಮರನಾಥ ಮಲ್ಲಾಡದ ಸೇರಿದಂತೆ ಸಮಾಜದ ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.
“ವೀರಶೈವ–ಲಿಂಗಾಯತ ಸಮಾಜದ ಶಕ್ತಿ ಅಪಾರ. ಸಂಘಟನೆಗಳು ಭಿನ್ನಾಭಿಪ್ರಾಯ ಮರೆತು ಒಂದಾದರೆ ಸಮಾಜದ ಅಭಿವೃದ್ಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.”
— ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು



