ವಿಜಯಸಾಕ್ಷಿ ಸುದ್ದಿ, ಗದಗ: ಜಾತಿ–ಮತ–ಭಾಷೆಗಳ ಅಂತರವನ್ನು ಮೀರಿ ಮಾನವತೆಯೇ ಧರ್ಮ ಎಂಬ ಸಂದೇಶವನ್ನು ಕುವೆಂಪು ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿದ್ದಾರೆ. ಯುವಜನತೆ ಕುವೆಂಪು ಅವರ ಚಿಂತನೆಗಳನ್ನು ಅರ್ಥಮಾಡಿಕೊಂಡು ಸಾಮಾಜಿಕ ಬದಲಾವಣೆಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಕರೆ ನೀಡಿದರು.
ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಗದಗ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರಂಭದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಅರ್ಪಿಸಲಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು ಕುವೆಂಪು ಅವರ ಸಾಹಿತ್ಯ, ದರ್ಶನ ಮತ್ತು ವಿಶ್ವಮಾನವ ತತ್ವದ ಪ್ರಸ್ತುತತೆಯ ಕುರಿತು ಮಾತನಾಡಿದರು.
ಹಿರಿಯ ಸಾಹಿತಿ ಚಂದ್ರಶೇಖರ ವಸ್ತ್ರದ ಉಪನ್ಯಾಸ ನೀಡುತ್ತಾ, ಭೂಮಿ ಮೇಲೆ ಹುಟ್ಟುವ ಪ್ರತಿ ಮಗು ವಿಶ್ವಮಾನವ. ಆ ನಂತರ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ ಮತ್ತು ಬಸವಣ್ಣನವರಂತೆ ಪ್ರತಿಯೊಬ್ಬ ವ್ಯಕ್ತಿಯೂ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದು ಕುವೆಂಪು ಹೇಳಿದ್ದಾರೆ ಎಂದು ತಿಳಿಸಿದರು.
ಮನುಜ ಮತ ವಿಶ್ವಪಥ' ಇದು ಕುವೆಂಪು ಅವರ ವಿಶ್ವಮಾನವ ಸಂದೇಶದ ತಿರುಳಾಗಿದೆ. ಅಂದರೆ, ಮನುಷ್ಯನ ಧರ್ಮವೇ ವಿಶ್ವದ ಪಥ’ ಎಂದು ಸಾರುವ ಮೂಲಕ ಎಲ್ಲ ಮಾನವರೂ ಒಂದೇ ಎಂಬ ಭಾವನೆಯನ್ನು ಬೆಳೆಸುವುದಾಗಿದೆ ಎಂದು ಸಾಹಿತಿ ಚಂದ್ರಶೇಖರ ವಸ್ತ್ರದ ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ 20 ಮಕ್ಕಳನ್ನು ಹಾಗೂ ತಲಾ 10 ಹಿರಿಯ ಹಾಗೂ ಯುವ ಸಾಹಿತಿ, ಕವಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣನವರ, ಶರೀಫ್ ಬಿಳೆಯಲಿ, ಡಾ. ರಾಜೇಂದ್ರ ಗಡಾದ, ಮುತ್ತು ಬಿಳೆಯಲಿ, ಶ್ರೀನಿವಾಸಮೂರ್ತಿ ಕುಲಕರ್ಣಿ, ಆರ್.ಎಸ್. ಬುರಡಿ, ಶ್ರೀಧರ ಚಿನಗುಡಿ ಇದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ್ ನಿರ್ವಹಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ವಿಶ್ವಮಾನವನೆಂಬ ಧ್ಯೇಯವೇ ನಮ್ಮ ಬದುಕಿನ ದಾರಿಯಾಗಲಿ. ಎಲ್ಲರೂ ಸಮಾನರು, ಎಲ್ಲರಲ್ಲೂ ಮಾನವೀಯತೆಯೇ ಮೊದಲ ಧರ್ಮ. ಸತ್ಯ, ಪ್ರೀತಿ ಮತ್ತು ಸಹಾನುಭೂತಿಗಳಿಂದಲೇ ನಿಜವಾದ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕುವೆಂಪು ಅವರು ಪ್ರತಿಪಾದಿಸಿದ ವಿಶ್ವಮಾನವ ತತ್ವವು ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ. ಮಾನವೀಯತೆ, ಸಮಾನತೆ, ಸಹಾನುಭೂತಿ ಹಾಗೂ ಸೌಹಾರ್ದತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ.
ಸಿ.ಎನ್. ಶ್ರೀಧರ.
ಜಿಲ್ಲಾಧಿಕಾರಿಗಳು, ಗದಗ.



