ನವದೆಹಲಿ: 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಬಿಜೆಪಿ ಉಚ್ಚಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿ ಜಾಮೀನು ನೀಡಿದ್ದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಡಿಸೆಂಬರ್ 23ರಂದು ನೀಡಿದ್ದ ದೆಹಲಿ ಹೈಕೋರ್ಟ್ ಆದೇಶದಂತೆ ಸೆಂಗಾರ್ ಅವರನ್ನು ಕಸ್ಟಡಿಯಿಂದ ಬಿಡುಗಡೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಈ ಪ್ರಕರಣದಲ್ಲಿ ಪರಿಶೀಲನೆಗೆ ಒಳಪಡಬೇಕಾದ ಅನೇಕ ಮಹತ್ವದ ಕಾನೂನು ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಹೇಳಿದೆ.
ಸಿಬಿಐ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಕುಲದೀಪ್ ಸೆಂಗಾರ್‌ಗೆ ನೋಟಿಸ್ ಜಾರಿ ಮಾಡಿದೆ. 2019ರಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯವು ಸೆಂಗಾರ್ ಅವರನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಡಿಸೆಂಬರ್ 23ರಂದು ದೆಹಲಿ ಹೈಕೋರ್ಟ್ ಆ ತೀರ್ಪನ್ನು ರದ್ದುಪಡಿಸಿ ಜಾಮೀನು ಮಂಜೂರು ಮಾಡಿತ್ತು.
ನ್ಯಾಯಮೂರ್ತಿಗಳಾದ ಸುಬ್ರಮಣಿಯಂ ಪ್ರಸಾದ್ ಹಾಗೂ ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ಪೀಠ, ಸೆಂಗಾರ್‌ಗೆ 15 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಹಾಗೂ ಸಮಾನ ಮೊತ್ತದ ಮೂರು ಶ್ಯೂರಿಟಿಗಳನ್ನು ಸಲ್ಲಿಸುವಂತೆ ಸೂಚಿಸಿತ್ತು. ಜೊತೆಗೆ, ಸಂತ್ರಸ್ತೆಯ ಮನೆಯ 5 ಕಿ.ಮೀ ವ್ಯಾಪ್ತಿಯಲ್ಲಿ ಪ್ರವೇಶಿಸಬಾರದು ಮತ್ತು ಸಂತ್ರಸ್ತೆ ಅಥವಾ ಆಕೆಯ ತಾಯಿಗೆ ಯಾವುದೇ ರೀತಿಯ ಬೆದರಿಕೆ ಹಾಕಬಾರದು ಎಂಬ ಷರತ್ತುಗಳನ್ನು ವಿಧಿಸಿತ್ತು.
ಆದರೆ ಇದೀಗ ಸುಪ್ರೀಂ ಕೋರ್ಟ್ ನೀಡಿರುವ ತಡೆಯಿಂದಾಗಿ, ಸೆಂಗಾರ್‌ಗೆ ನೀಡಿದ್ದ ಜಾಮೀನು ಅಮಾನತುಗೊಂಡಿದ್ದು, ಮುಂದಿನ ಆದೇಶದವರೆಗೆ ಜೈಲಿನಲ್ಲೇ ಇರಬೇಕಾಗಿದೆ.



