ವಿಜಯಸಾಕ್ಷಿ ಸುದ್ದಿ, ಗದಗ: ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ತಕ್ಷಣವೇ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಮಾಡುವಂತೆ ಮಾದಿಗ ಸಂಘಟನೆಗಳ ಒಕ್ಕೂಟ ಗದಗ ವತಿಯಿಂದ ಜನಾಕ್ರೋಶ ಪ್ರತಿಭಟನೆ ಮೂಲಕ ಗದಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಮಾದಿಗ ಸಮಾಜ ಒಕ್ಕೂಟದ ಮುಖಂಡರು, ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಜಾತಿಗಳ ಸಮುದಾಯದೊಳಗಿನ ಅತೀ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ಜಾರಿಯಾಗಬೇಕಿರುವ ಒಳ ಮೀಸಲಾತಿಯ ಬೇಡಿಕೆ ಮತ್ತು ಹೋರಾಟ 35 ವರುಷಗಳಿಂದ ನನೆಗುದಿಗೆ ಬಿದ್ದಿದೆ. ಈ ಅಸಮಾನತೆಯನ್ನು ಸರಿಪಡಿಸಲು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಆದೇಶವನ್ನು ನೀಡಿದೆ.
ಆದರೆ, ಕರ್ನಾಟಕ ಸರ್ಕಾರವು ಈ ಸರ್ವೋಚ್ಚ ನ್ಯಾಯಾಲಯದ ತೀರ್ಪುನ್ನು ಜಾರಿಗೊಳಿಸಲು ಅನಗತ್ಯವಾಗಿ ವಿಳಂಬ ಮಾಡುತ್ತಿರುವುದು ನಮ್ಮ ಸಮುದಾಯದಲ್ಲಿ ತೀವ್ರ ಅಸಮಾಧಾನ ಮತ್ತು ಆತಂಕಕ್ಕೆ ಕಾರಣವಾಗಿದೆ. ನಾಗಮೋಹನ್ ದಾಸ್ ಆಯೋಗಕ್ಕೆ ಸರ್ಕಾರ ಸರಿಯಾದ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗಸ್ಟ್ 11ರಿಂದ ವಿಧಾನ ಮಂಡಲಗಳ ಅಧಿವೇಶನ ಆರಂಭವಾಗುತ್ತಿದ್ದು, ಸರ್ಕಾರದ ವಿಳಂಬ ಧೋರಣೆಯ ಬಗ್ಗೆ ಜನಾಕ್ರೋಶ ಉಗ್ರಸ್ವರೂಪ ತಾಳುವುದು ನಿಶ್ಚಿತ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ ಅಶೋಕ ಕುಡತಿನ್ನಿ, ಉಡಚಪ್ಪ ಹಳ್ಳಿಕೇರಿ, ರಾಘವೇಂದ್ರ ಪರಸಪ್ಪ ಪರಾಪೂರ, ಗಣೇಶ್ ಹುಬ್ಬಳ್ಳಿ, ಮಂಜುನಾಥ್ ಕೋಟ್ನೆಕಲ್, ಲಿಂಗಪ್ಪ ದೊಡ್ಡಮನಿ, ಭೀಮಪ್ಪ ಮಾದರ, ಮಲ್ಲು ಮಾದರ, ಶಿವಪ್ಪ ಮಾದರ, ಮಾಲತೇಶ್ ಮಾದರ, ರವಿ ಮಾದರ, ಚಂದ್ರಶೇಖರ್ ಮಾದರ, ಸುರೇಶ್ ಹಾದಿಮನಿ, ಪ್ರವೀಣ್ ವಡ್ಡಟ್ಟಿ, ಚಂದ್ರು ಹಂಚಿನಾಳ, ಮಂಜು ಹಾಬುರಡಿ, ಪಡೆಯಪ್ಪ ಪೂಜಾರ, ಬಸವರಾಜ್ ಮುಳ್ಳಾಳ, ಡಿ.ಜೆ. ಕಟ್ಟಿಮನಿ, ಚಂದ್ರು ಹರಿಜನ ಸೇರಿದಂತೆ ಮಾದಿಗ ಸಮಾಜದ ಸ್ವಾಮೀಜಿಗಳು ವಕೀಲರು, ನೌಕರರು ಪಾಲ್ಗೊಂಡಿದ್ದರು.
ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ಆರು ತಿಂಗಳಾದರೂ ಸರಿಯಾದ ಮಾಹಿತಿಗಳು ಆಯೋಗಕ್ಕೆ ಬಂದಿಲ್ಲ. ಕೆಲವು ಇಲಾಖೆಗಳ ಮಾಹಿತಿ ಅಪೂರ್ಣವಾಗಿದೆ. ಆಯೋಗ ನಡೆಸಿದ ಸಮೀಕ್ಷೆ, ಸ್ಟಿಕ್ಕರ್ ಅಂಟಿಸುವ ಪ್ರಕ್ರಿಯೆಗಳು ಗೊಂದಲ ಹುಟ್ಟುಹಾಕಿ ನಗೆಪಾಟಲಿಗೀಡಾಯಿತು. ಮೂರು ವಾರದಲ್ಲಿ ಸಮೀಕ್ಷೆ ಮುಗಿಸಿ ಸರ್ಕಾರದ ಹೇಳಿಕೆ ಕಿಮ್ಮತ್ತು ಕಳೆದುಕೊಂಡಿದೆ ಎಂದು ಆರೋಪಿಸಿದರು.