ಅವೈಜ್ಞಾನಿಕ ಒಳ ಮೀಸಲಾತಿ ವರ್ಗೀಕರಣ | 11ನೇ ದಿನದತ್ತ ಅಹೋರಾತ್ರಿ ಧರಣಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳ ಮೀಸಲಾತಿ ವರ್ಗೀಕರಣದ ವಿರುದ್ಧ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ವೃತ್ತದಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಗುರುವಾರ 11ನೇ ದಿನದತ್ತ ತಲುಪಿದೆ.

Advertisement

ಬುಧವಾರ ಗದಗ ಜಿಲ್ಲೆಯ 72 ತಾಂಡಾಗಳ ಪೈಕಿ ನಿಗದಿತ ವೇಳಾಪಟ್ಟಿಯಂತೆ ಯಲಿಶಿರುಂಜ್, ಅತ್ತಿಕಟ್ಟಿ ತಾಂಡಾ, ಬೂದಿಹಾಳ, ಕುಂದ್ರಳ್ಳಿ, ಯಲ್ಲಾಪುರ ತಾಂಡಾ, ನಾಗರಸಕೊಪ್ಪ, ಕಣವಿ ತಾಂಡಾಗಳ ನೂರಾರು ಬಂಜಾರರು ಧರಣಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಲವಣವನ್ನು (ಉಪ್ಪು) ಎತ್ತಿನ ಬಂಡಿಯಲ್ಲಿ ತಂದು ಅಲ್ಲಲ್ಲಿ ಕುಳಿತು ಉಪ್ಪನ್ನು ಮಾರುತ್ತಾ ಬಂಜಾರ ಜನಾಂಗ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವೆಂದು ತಮ್ಮ ಹಿಂದಿನ ಕಸಬನ್ನು ಮಾಡುತ್ತಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಒಳ ಮೀಸಲಾತಿ ವರ್ಗೀಕರಣದಲ್ಲಿ ಸರ್ಕಾರ ಬಂಜಾರ ಸಮುದಾಯಕ್ಕೆ ಘೋರ ಅನ್ಯಾಯ ಮಾಡಿದೆ ಎಂದು ಖಂಡಿಸಿದರು.

ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ್ ಅಂಗಡಿ ಮಾತನಾಡಿ, ಬಂಜಾರ ಜನಾಂಗ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದು, ಹಿಂದಿನ ಕಾಲದಲ್ಲಿ ಬಂಜಾರ ಜನಾಂಗ ಊರಿಂದ ಊರಿಗೆ ಹೋಗಿ ಉಪ್ಪನ್ನು ಮಾರಿ ಜೀವನ ಸಾಗಿಸುತ್ತಿದ್ದರು. ಈ ದೇಶಕ್ಕೆ ಲಮನ್ ಮಾರ್ಗಗಳನ್ನು ಕೊಟ್ಟ ಜನಾಂಗಕ್ಕೆ ಸರ್ಕಾರ ಪರಿಶಿಷ್ಟ ಜಾತಿಗಳ ಅವೈಜ್ಞಾನಿಕ ಒಳ ಮೀಸಲಾತಿ ವರ್ಗೀಕರಣ ಮಾಡಿ ಬಂಜಾರ ಸಮುದಾಯದ ಭವಿಷ್ಯಕ್ಕೆ ಮರಣ ಶಾಸನ ಬರೆದಿದೆ. ಹಾಗಾಗಿ ಸರ್ಕಾರ ಬಂಜಾರ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಯಲಿಶಿರುಂಜ್, ಅತ್ತಿಕಟ್ಟಿ ತಾಂಡಾ, ಬೂದಿಹಾಳ, ಕುಂದ್ರಳ್ಳಿ, ಯಲ್ಲಾಪುರ ತಾಂಡಾ, ನಾಗರಸಕೊಪ್ಪ, ಕಣವಿ ತಾಂಡಾಗಳ ಬಂಜಾರ ಸಮುದಾಯದ ಮುಖಂಡರು, ನಾಯಕರು, ಕಾರಭಾರಿಗಳು ಹಾಗೂ ಹಿರಿಯರು ಪಂಚರ ನೇತೃತ್ವದಲ್ಲಿ ಹೋರಾಟದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ರವಿಕಾಂತ ಅಂಗಡಿ, ಕೆ.ಸಿ. ನಭಾಪುರ, ಐ.ಎಸ್. ಪೂಜಾರ, ಟಿ.ಡಿ. ಪೂಜಾರ, ಧನುರಾಮ ತಂಬೂರಿ, ಕೃಷ್ಣಪ್ಪ ಲಮಾಣಿ, ಸಂತೋಷ ಪವಾರ್, ಆಗ್ರಪ್ಪ ನಾಯಕ್, ಚೆನ್ನಪ್ಪ ಕಾರಭಾರಿ, ಶಿವಪ್ಪ ಲಮಾಣಿ, ಶಶಿಕುಮಾರ್ ಜಾದವ್, ಧನುರಾಮ ತಂಬೂರಿ, ರಮೇಶ್ ಪವಾರ್, ಕಿರಣ್ ರಾಠೋಡ್, ಭೀಮಪ್ಪ ನಾಯಕ್, ಭೋಜಪ್ಪ ಲಮಾಣಿ, ವಿಠ್ಠಲ್ ಕಾರಭಾರಿ, ಹಾಮಜಪ್ಪ ಬಡಿಗೇರ್, ಕುಶಾಲ್ ರಾಠೋಡ್, ಧಾಮಲಪ್ಪ ನಾಯಕ್, ಲಕ್ಷ್ಮಣ ನಾಯಕ್, ಪರಮೇಶ್ ಲಮಾಣಿ, ಲಕ್ಷ್ಮಣ ಲಮಾಣಿ, ಭೋಜಪ್ಪ ನಾಯಕ್, ದ್ಯಾಮಣ್ಣ ಕಾರಭಾರಿ, ಹರಿಯಪ್ಪ, ಉಮೇಶ್ ನಾಯಕ್, ಪರಮೇಶ್ ಕಾರಭಾರಿ, ನರಸಪ್ಪ ಡಾವ, ಶೇಖಪ್ಪ ನಾಯಕ್, ಗೆಮಪ್ಪ ಕಾರಭಾರಿ ಹಾಗೂ ಗೋವಿಂದ ಲಮಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗುರುವಾರ ಸೇವಾಲಾಲ ನಗರ, ಹುಲಕೋಟಿ, ಜಾಲವಾಡಗಿ, ಶೆಟ್ಟಿಗೆರೆ, ನೀಲೋಗಲ್, ದೋಡ್ಡೂರ, ನೆಲ್ಲೂರ ತಾಂಡಾಗಳ ಬಂಜಾರರು ಬೆಳಿಗ್ಗೆ 11 ಗಂಟೆಗೆ ಗದಗ ನಗರದ ಚನ್ನಮ್ಮ ವೃತ್ತದಿಂದ ಸರ್ಕಾರದ ವಿರುದ್ಧ ದಂಡ್ ಚಳುವಳಿ (ಹೊಳಿ ಲೆಂಗಿ) ಮೂಲಕ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ.


Spread the love

LEAVE A REPLY

Please enter your comment!
Please enter your name here