ವಿಜಯಸಾಕ್ಷಿ ಸುದ್ದಿ, ರೋಣ: ಸೌಹಾರ್ದತೆ, ಸಹೋದರತೆ, ಏಕತೆ ಇವುಗಳು ನಮ್ಮ ದೇಶದ ಪ್ರತೀಕವಾಗಿದ್ದು, ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲರೂ ಒಂದಾಗಿ ಸಹಬಾಳ್ವೆ ನಡೆಸಬೇಕು ಎಂದು ಬಾಲೆಹೊಸುರ ಹಾಗೂ ಶಿರಹಟ್ಟಿ ಫಕೀರೇಶ್ವರ ಶ್ರೀಮಠ ಪೂಜ್ಯರಾದ ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಅವರು ಮಾರನಬಸರಿ ಗ್ರಾಮದಲ್ಲಿ ಸೋಮವಾರ ಜರುಗಿದ ಸರ್ವಧರ್ಮ ಸಮನ್ವಯ ಪೀಠ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಕಾಣದ ಕೈಗಳು ಇಂದಿನ ಸಮಾಜದಲ್ಲಿ ಜಾತಿ-ಧರ್ಮಗಳ ವಿಷ ಬೀಜಗಳನ್ನು ಬಿತ್ತಿ ನಾಗರಿಕ ಸಮಾಜವನ್ನು ಒಡೆಯುತ್ತಿವೆ. ಇದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು. ಹಿಂದು, ಮುಸ್ಲಿಂ, ಕ್ರೆöÊಸ್ತರೆಲ್ಲರೂ ಒಂದಾಗುವ ಮೂಲಕ ಇಂತವುಗಳನ್ನು ಎದುರಿಸಿ ಭಾವೈಕ್ಯತೆಯನ್ನು ಬೆಸೆಯಬೇಕು. ಅಂದಾಗ ಮಾತ್ರ ಸಮಾನತೆಯ ನಾಡನ್ನು ಕಟ್ಟಲು ಸಾಧ್ಯ ಎಂದರು.
ಮಠಗಳು ಕಡಿಮೆಯಾಗುತ್ತಿರುವ ಈ ಸಂಧರ್ಭಗಳಲ್ಲಿ ಸರ್ವಧರ್ಮದವರು ಕೂಡಿಕೊಂಡು ಮಠ ಸ್ಥಾಪನೆ ಮಾಡಿದ್ದು ಅಭಿನಂದನಾರ್ಹ. ಶ್ರೀಮಠ ಸರ್ವಧರ್ಮದವರ ಆಸ್ತಿಯಾಗಿ ಬೆಳೆಯಲಿ ಎಂದ ಶ್ರೀಗಳು, ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜಮುಖಿ ಕಾರ್ಯಗಳು ಸಹ ನಡೆಯಬೇಕು. ಮುಖ್ಯವಾಗಿ ಸರ್ವಧರ್ಮ ಸಮನ್ವಯ ಪೀಠವಾಗಿ ಉಳಿದು ಎಲ್ಲ ಭಕ್ತರಿಗೂ ಧಾರ್ಮಿಕತೆಯನ್ನು ಭೋದಿಸಬೇಕು ಎಂದು ಆಶೀರ್ವದಿಸಿದರು.
ಇದೇ ಸಂಧರ್ಭದಲ್ಲಿ ಭೂ ಧಾನಿಗಳಿಗೆ ಹಾಗೂ ಸೇವೆಗೈದ ಮಹನೀಯರುಗಳಿಗೆ ಸತ್ಕರಿಸಲಾಯಿತು.
ಹಿರೇಮಾಗಡಿ ಹಾಗೂ ಸರ್ವಧರ್ಮ ಸಮನ್ವಯ ಪೀಠದ ಶಿವಮೂರ್ತಿ ಶ್ರೀಗಳು, ಶಾಖಾ ಶಿವಯೋಗ ಮಂದಿರದ ಚನ್ನಬಸವ ಶ್ರೀಗಳು, ಶಿದ್ದನಕೊಳ್ಳದ ಡಾ. ಶಿವಕುಮಾರ ಶ್ರೀಗಳು, ಶಿವಯೋಗಿ ದೇವರು ಸಾನ್ನಿಧ್ಯ ವಹಿಸಿದ್ದರು. ವೇ.ಮೂ. ವಿಶ್ವನಾಥ ಪಂಡಿತ ವೈದ್ಯ ಸಮ್ಮುಖ ವಹಿಸಿದ್ದರು. ಅಧ್ಯಕ್ಷತೆಯನ್ನು ಶಾಸಕ ಜಿ.ಎಸ್. ಪಾಟೀಲ ವಹಿಸಿದ್ದರು.
ಶರಣಪ್ಪ ಕುರಿ, ಅಂದಪ್ಪ ಮರಡಿ, ಶೇಖರಗೌಡ ಪಾಟೀಲ, ಶಂಕ್ರಗೌಡ ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಪಿಡಿಒ ಎಸ್.ಆರ್. ಸಂಕನೂರ, ಶರಣಪ್ಪ ಮ್ಯಾಗೇರಿ, ಸಂಜೀವ ಬಿಜಾಪೂರ, ಸುರೇಶ ಪಲ್ಲೇದ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ಶಿವಕುಮಾರ ದಿಂಡೂರ ಸ್ವಾಗತಿಸಿದರು. ಎಸ್.ಬಿ. ಪೂಜಾರ ನಿರೂಪಿಸಿದರು, ಭರತ ಹಾದಿಮನಿ ವಂದಿಸಿದರು.



