ಗದಗ:- ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಗೋಳಾಟ ಇನ್ನೂ ನಿಂತಿಲ್ಲ. ಸರ್ಕಾರ ಗೊಬ್ಬರ ಕೊರತೆ ಇಲ್ಲ ಎನ್ನುತ್ತಿದೆ. ಆದರೆ, ರೈತರಿಗೆ ಮಾತ್ರ ಗೊಬ್ಬರ ಸಿಗುತ್ತಿಲ್ಲ.
ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ರೈತರ ಪರದಾಟ ಮುಂದುವರಿದಿದೆ. ಜಿಲ್ಲೆಯಲ್ಲಿ ಮಳೆ ಇನ್ನೂ ನಿಂತಿಲ್ಲ. ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಗೋವಿನ ಜೋಳ ಕೊಳೆಯುತ್ತಿದೆ. ಸಕಾಲಕ್ಕೆ ಯೂರಿಯಾ ಹಾಕದಿದ್ದರೆ ಬೆಳೆ ಸಂಪೂರ್ಣ ಹಾನಿಯಾಗಲಿದೆ. ಹೀಗಾಗಿ ಅನ್ನದಾತರು ಗೊಬ್ಬರಕ್ಕಾಗಿ ಅನ್ನ, ನೀರು, ನಿದ್ದೆ ಬಿಟ್ಟು ಹಗಲು, ರಾತ್ರಿ ಕಾಯುತ್ತಿದ್ದಾರೆ. ಆದರೆ, ರೈತರಿಗೆ ಗೊಬ್ಬರ ಸಿಗ್ತಿಲ್ಲ.
ಇನ್ನೂ ಗದಗದ ಎಸ್ ವಿ ಹಲವಾಗಲಿ ವಿತರಣೆಯ ಅಂಗಡಿಗೆ ನೋ ಸಾಕ್ಟ್ ಬೋರ್ಡ್ ಹಾಕಲಾಗಿದ್ದು, ಕೃಷಿ ಇಲಾಖೆ ವಿರುದ್ದ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಬೆಳ್ಳಂ ಬೆಳಗ್ಗೆ ಯೂರಿಯಾ ಗೊಬ್ಬರಕ್ಕಾಗಿ ಅನ್ನದಾತರು ಗೋಳಾಟ ನಡೆಸಿದ್ದಾರೆ. ಗದಗ ನಗರದ ನ್ಯಾಮಜೋಶಿ ರಸ್ತೆಯಲ್ಲಿರುವ ಯೂರಿಯಾ ವಿತರಣೆಯ ಅಂಗಡಿ ಬಳಿ ಬೆಳ್ಳಂ ಬೆಳಗ್ಗೆ ಸುಮಾರು 4-5 ಗಂಟೆಗೆ ರೈತರು ಕ್ಯೂ ನಿಂತಿದ್ದಾರೆ.
ಗೋವಿನಜೋಳ ಬೆಳೆಗೆ ಗೊಬ್ಬರ ಹಾಕಲು ಪರದಾಟ ನಡೆಸಿರುವ ಅನ್ನದಾತರು, ಸಾಲಾಸೋಲ ಮಾಡಿ ಗೋವಿನಜೋಳ ಬಿತ್ತನೆ ಮಾಡಿದ್ದೇವೆ. ಬಿತ್ತನೆ ಮಾಡಿದ ಬೆಳೆ ಜಮೀನಲ್ಲಿ ಹಾಳಾಗುತ್ತಿದೆ. ಯೂರಿಯಾ ಗೊಬ್ಬರಕ್ಕಾಗಿ ಅಲೆದಾಡುತ್ತಿದ್ದೇವೆ. ನಮ್ಮ ಗೋಳು ಜಿಲ್ಲಾಡಳಿತ, ಕೃಷಿ ಇಲಖೆ ಕೇಳುತ್ತಿಲ್ಲೆಂದು ಆಕ್ರೋಶ ಹೊರ ಹಾಕಿದ್ದಾರೆ. ಯೂರಿಯಾ ಸಿಗದೆ ಮರಳಿ ತಮ್ಮ ಮನೆಗಳತ್ತ ರೈತರು ಹೊರಟಿದ್ದಾರೆ.
ಒಟ್ಟಾರೆ ಗದಗ ನಗರದಲ್ಲೇ ಗೊಬ್ಬರಕ್ಕಾಗಿ ಇಷ್ಟೊಂದು ರಾದ್ಧಾಂತ ನಡೆದರೂ ಜಿಲ್ಲಾಡಳಿತ, ಕೃಷಿ ಇಲಾಖೆ ಕ್ಯಾರೇ ಅನ್ನುತ್ತಿಲ್ಲ. ರೈತರ ಮಕ್ಕಳು ಶಿಕ್ಷಣ ಬಿಟ್ಟು ಗೊಬ್ಬರಕ್ಕಾಗಿ ಕಾಯುತ್ತಿರುವ ದೃಶ್ಯಗಳು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಸಗೊಬ್ಬರ ಅಭಾವ;
ಬೇಡಿಕೆ – 23614 ಮೆಟ್ರಿಕ್ ಟನ್.
ಪೂರೈಕೆ – 22497 ಮೆಟ್ರಿಕ್ ಟನ್.
ವಿತರಣೆ – 21674 ಮೆಟ್ರಿಕ್ ಟನ್.
ಕೊರತೆ – 5836 ಮೆಟ್ರಿಕ್ ಟನ್.
ಸ್ಟಾಕ್ – 823 ಮೆಟ್ರಿಕ್ ಟನ್.