ಹಾಸನ: ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ನಡೆದ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಅಂಗಡಿಯಲ್ಲಿ ವ್ಯವಹಾರದಲ್ಲಿ ನಿರತರಾಗಿದ್ದ ವ್ಯಕ್ತಿ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಜೀವ ಕಳೆದುಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.
ಮೃತ ವ್ಯಕ್ತಿ ದುಮ್ಮೇನಹಳ್ಳಿ ಗ್ರಾಮದ ನಿವಾಸಿ ಪ್ರವೀಣ್ (45). ಅವರು ಅರಸೀಕೆರೆ ಪಟ್ಟಣದಲ್ಲಿ ಅಟೊಮೊಬೈಲ್ ಅಂಗಡಿ ನಡೆಸುತ್ತಿದ್ದರು. ಜ.12ರ ಸಂಜೆ ಅಂಗಡಿಯಲ್ಲಿ ಗ್ರಾಹಕರಿಗೆ ವಸ್ತುಗಳನ್ನು ನೀಡುತ್ತಿದ್ದ ಸಂದರ್ಭದಲ್ಲೇ ಪ್ರವೀಣ್ ಏಕಾಏಕಿ ನೆಲಕ್ಕುರುಳಿದ್ದಾರೆ.
ಸ್ಥಳದಲ್ಲಿದ್ದ ಅವರ ಪುತ್ರ ತಕ್ಷಣ ಸ್ಪಂದಿಸಿ ತಂದೆಗೆ ಪ್ರಥಮ ಚಿಕಿತ್ಸೆಯಾಗಿ ಎದೆ ಒತ್ತುವ ಪ್ರಯತ್ನ ಮಾಡಿದ್ದಾನೆ. ಆದರೆ ಯಾವುದೇ ಪ್ರಯೋಜನವಾಗದೆ, ಪ್ರವೀಣ್ ಅಂಗಡಿಯಲ್ಲೇ ಮೃತಪಟ್ಟಿದ್ದಾರೆ.
ಈ ಪ್ರಕರಣ ಮತ್ತಷ್ಟು ನೋವು ತಂದಿರುವುದು ಕುಟುಂಬ ಹಿನ್ನೆಲೆಯಿಂದ. ಕೊರೊನಾ ಸಮಯದಲ್ಲಿ ಪ್ರವೀಣ್ ಅವರ ಪತ್ನಿ ಸಾವನ್ನಪ್ಪಿದ್ದು, ಇದೀಗ ತಂದೆಯನ್ನೂ ಕಳೆದುಕೊಂಡ ಮಗ ಒಬ್ಬನೇ ಅನಾಥನಾಗಿ ಉಳಿದಿದ್ದಾನೆ.
ಘಟನೆಯ ಸಂಪೂರ್ಣ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ನೋಡಿದವರು ಕಣ್ಣೀರಿಡುವಂತಾಗಿದೆ.



