ನಟನ ಆಂಗಿಕ ಅಭಿನಯ, ಸಂಭಾಷಣೆ, ವೇಷ- ಭೂಷಣದೊಂದಿಗೆ ಮಾನವನ ನಿತ್ಯ ಬದುಕಿನಲ್ಲಾದ ಭಾವನೆಯನ್ನು ಕಲಾವಿದನ ಅಭಿವ್ಯಕ್ತಿಯನ್ನು ರಂಗಭೂಮಿಯ ಮೂಲಕ ವ್ಯಕ್ತಪಡಿಸುವ ಮಾಧ್ಯಮವೇ ರಂಗಕಲೆ. ಗ್ರೀಕ್ನಾಟಕ ಕ್ಷೇತ್ರದಿಂದಭಾರತೀಯ ಭಾಷೆಗಳವರೆಗೂ, ನಾಟಕ ಸಾಹಿತ್ಯದ ಕುರಿತು ಅವಲೋಕಿಸಲಾಗಿದೆ. ಭಾರತೀಯ ಭಾಷೆಗಳಲ್ಲಿ ರಂಗಭೂಮಿ ಮತ್ತು ನಾಟಕ ಸಾಹಿತ್ಯದ ದೃಷ್ಟಿಯಿಂದ ಭಾರತೀಯ ನಾಟಕ ಪರಂಪರೆಗೆ ಜಾನಪದವೇ ಆಧಾರವಾಗಿತ್ತೆಂದು ತಿಳಿದುಕೊಳ್ಳಬೇಕು.
ಇಂತಹ ರಂಗ ಕಲೆಯನ್ನು ಬೆಳೆಸಿಕೊಂಡು ಬೆಂಗಳೂರಿನ ಮಂಗಳಮುಖಿ ಸಮುದಾಯ ಅವರ ಬದುಕನ್ನಾದರಿಸಿದ `ತಲ್ಕಿ’ ನಾಟಕವನ್ನು ಪ್ರದರ್ಶಿಸುತ್ತ, ಟ್ರಾನ್ಸ್ ಝಂಡರ್ ಬದುಕಿನ ರೂಪವನ್ನು ಬಯಲು ಮಾಡುತ್ತ, ಮಾನವರನ್ನು ಮಾನವರಂತೆ ಕಾಣುವ ಜಾಗೃತಿಯನ್ನು ನೀಡುತಿದ್ದಾರೆ.
ಗಂಡು ಅಲ್ಲದ, ಹೆಣ್ಣು ಅಲ್ಲದ, ಬದಕಿನ ನೋವಿನ ನರಕದಲಿ ನುಲಿದು-ನಲಿದು, ತಮ್ಮದೇ ಪರಿವಾರ ಬಂಧನದ ಬದುಕಿಲ್ಲದ, ಸೂರಿಲ್ಲದ, ಸಿರಿಯಿಲ್ಲದ, ಒಲ್ಲದ, ಅಲ್ಲದ, ಬಯಸದ, ಬದುಕಿನಲಿ ನುಲಿದು, ನಲಿದು ಸುಡುಗಾಡು ಬದುಕೆಂದರೂ ಸಿರಿ ಸಂಭ್ರಮದಿಂದ ಬದುಕುವ ಮುಂಗಳಮುಖಿಯರ ಬದುಕಿನ ಬವಣೆಯಲಿ ಭಿಕ್ಷೆ ಬೇಡಿ ಬದುಕುವದಷ್ಟೇ ಅಲ್ಲ, ತಮ್ಮೊಳಗಿನ ಕಲಾ ಕೌಶಲ್ಯದಿಂದ ಮತ್ತೊಂದು ಹೊಸ ಬದುಕನ್ನು ಕಟ್ಟುವದರ ಜೊತೆಗೆ ಹಲವಾರು ಕಲೆಗಳಲ್ಲಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹೊಸ ಬದುಕನ್ನು ಕಟ್ಟುತಿದ್ದಾರೆ.
ಬೆಂಗಳೂರಿನ ಪಯಣ ಸಂಸ್ಥೆಯ ಮಂಗಳಮುಖಿಯರು ತಮ್ಮ ಸಮುದಾಯವನ್ನು ಒಟ್ಟುಗೂಡಿಸಿ ಟ್ರೂಥ್ ಡ್ರೀಮ್ ಯೋಜನೆಯ ತಲ್ಕಿ ಎಂಬ ನಾಟಕವನ್ನು ಸಂಯೋಜಿಸಿ ರಾಜ್ಯದ ತುಂಬ ಪ್ರದರ್ಶಿಸುತ್ತ ಸಮಾಜದ ಜೊತೆ ಬೆರೆತು ಬಾಳುವ ಹಾದಿಯಲ್ಲಿ ಸಾಗುತಿದ್ದಾರೆ. ನರಕದ ಬಾಳನು ಕಂಡುಂಡು, ಹೊಟ್ಟೆ ಹೊರೆಯಲು ಗಟ್ಟಿಯಾಗಿ ಮೆಟ್ಟಿ ನಿಂತು, ಸಾವನು ಸಂಗಾತಿ ಮಾಡಿಕೊಂಡು, ರಾಕ್ಷಸ ಮನುಜರ ಚಿತ್ರಹಿಂಸೆಯ ಸಹಿಸಿ, ಅಲ್ಲದ ಬದುಕಿಗೆ ಬೇಸತ್ತು ತನ್ನೊಳಗಿನ ಸತ್ವವನ್ನು ಪ್ರದರ್ಶಿಸುತ್ತ ಕಸವಾದ ಬದುಕನ್ನು ಹಸನು ಮಾಡಿ, ಹೊಸ ಬದುಕಿನ ಶಕ್ತಿಯಾಗಿ ಹಲವಾರು ಮಂಗಳ ಮುಖಿಯರ ಬದುಕಿನ ಯಶೋಗಾಥೆಯನ್ನು ಕಾಣುತ್ತೇವೆ. ಅಂತಹವರಲ್ಲಿ ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷರಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಜೋಗತಿ ಮಂಜಮ್ಮ ನಮಗೆಲ್ಲ ಮಾದರಿ.
ಪಯಣಪಯಣ ಸಂಸ್ಥೆಯು 2009ರಲ್ಲಿ ಸ್ಥಾಪನೆಯಾಗಿದ್ದು, ನೃತ್ಯ ಕಾರ್ಯಕ್ರಮದ ಮೂಲಕ ತೆರವುಗೊಂಡ ಟ್ರುಥ್ ಡ್ರೀಮ್ ಪ್ರಾಜೆಕ್ಟ್ ನ ಮುಂದಿನ ಭಾಗವಾಗಿ, ತಲ್ಕಿ ನಾಟಕ ರೂಪಗೊಂಡಿದೆ. 55 ವರ್ಷ ದಾಟಿದ ಸಮುದಾಯದ ಸದಸ್ಯರನ್ನು ಒಟ್ಟುಗೂಡಿಸಿ, ಒಂದು ನಾಟಕ ಕಟ್ಟಿ, ಅವರೇ ಅಭಿನಯಿಸಿ, ಈ ನಾಟಕದ ಮೂಲಕ ಅವರ ಕನಸುಗಳು ಮತ್ತೆ ಮತ್ತೆ ನಿಜವಾಗಿಸಬೇಕೆನ್ನುವ ವಿಶೇಷ ಆಶಯಕ್ಕೆ ಶ್ರೀಜಿತ್ ಸುಂದರ ಅವರ ನಿರ್ದೇಶನ ಕೈಜೋಡಿಸಿದೆ. ಸಮುದಾಯದ ಹಿರಿಯರನ್ನು ಒಳಗೊಂಡ ನಾಟಕವಾದ್ದರಿಂದ, ಸಮುದಾಯದ ಸುಂದರ ಸಾಂಸ್ಕೃತಿಕ ಚಿತ್ರಣವನ್ನು ಕಟ್ಟಿಕೊಡುವ ಸಾಧ್ಯತೆಯನ್ನು ಕಂಡುಹಿಡಿದು, ಇದನ್ನು ಸಫಲಗೊಳಿಸಲು ನಿರ್ದೇಶಕ ಶ್ರೀಜಿತ್ ಸುಂದರ ಅವರ ಸಮುದಾಯದೊಟ್ಟಿಗಿನ ಅಗಾಧ ಅನುಭವ ನೆರವಾಗಿದೆ.
ನಾಟಕದಲ್ಲಿ ಶಾಂತಮ್ಮ, ಲಕ್ಷ್ಮಿಯಮ್ಮ, ರೇವತಿ.ಎ, ಭಾನಮ್ಮ, ಶೋಭನಾ ಕುಮಾರಿ, ಸರವನ, ಚಾಂದಿನಿ ನಿರ್ದೇಶನ – ಶ್ರೀಜಿತ್ ಸುಂದರ, ಸಹಾಯಕ ನಿರ್ದೇಶಕಿ-ರೇವತಿ, ನಿರ್ವಹಣೆ -ಚಾಂದಿನಿ, ತ್ರಿಮೂರ್ತಿ, ಸಹ ನಿರ್ದೇಶನ- ರೇವಂತ್ ಆರ್, ಲೈಟಿಂಗ್ ಡಿಸೈನ್- ಏ ವಿಠ್ಠಲ್ (ಅಪ್ಪಯ್ಯ), ವಸ್ತ್ರ ವಿನ್ಯಾಸ- ಶ್ರೀಜಿತ್ ಸುಂದರ, ಸಂಕೀರ್ತಿ, ಪೊಸ್ಟರ್ ಡಿಸೈನ್ – ರಫೀಖ್ ಇಸ್ಮಾಯಿಲ್, ಸುಮಿ, ಮೇಕಪ್- ಕೌಶಲ್ಯ ಶಂಕರ್, ಸಂಗೀತ ಸಂಯೋಜನೆ- ಸಂದೀಪ್ ಕುಮಾರ್, ಸಂಗೀತ ನಿರ್ವಹಣೆ-ಮದನ್, ಟೆಕ್ನಿಕಲ್ ಅಸಿಸ್ಟೆಂಟ್-ಅನೀಶ್ ಇವರೆಲ್ಲರ ಕಾರ್ಯ ನಿರ್ವಹಣೆ ನಾಟಕ ಯಶಸ್ವಿಗೆ ಕಾರಣವಾಗಿದೆ.
ರಾಜ್ಯದ ತುಂಬ ಪಯಣ ಸಂಸ್ಥೆ ಆಯೋಜಿಸುವ ತಲ್ಕಿ ನಾಟಕವನ್ನು ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳು ಜಿಲ್ಲಾ ಕಾರಾಗೃಹ ಗದಗ, ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಮುಂಡರಗಿ ಹಾಗೂ ಸೃಷ್ಟಿ ಸಂಕುಲ ಸಂಸ್ಥೆ-ಗದಗ, ನವರಸ ಕಲಾಸಂಘ-ಬೆಟಗೇರಿ ಇವುಗಳ ಸಹಯೋಗದಲ್ಲಿ ಜುಲೈ 8ರಂದು ಜಿಲ್ಲಾ ಕಾರಾಗೃಹ ಗದಗದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಶಹಜಹಾನ ಮುದಕವಿ ಸಹಾಯಕ ಕುಲಸಚಿವರು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ ಇವರು ಉದ್ಘಾಟಿಸಲಿದ್ದಾರೆ.
ಜಿಲ್ಲಾ ಕಾರಾಗೃಹದ ಅಧೀಕ್ಷಕ ಈರಣ್ಣ ಬ.ರಂಗಾಪುರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎ.ಎಸ್. ವiಕಾನದಾರ, ಮಾಲಕ ಚಂದ್ರು ನಾವಿ, ಮಹಾಂತೇಶ ಬೆಕರಿ ಮುಂಡರಗಿ ಭಾಗವಹಿಸಲಿದ್ದಾರೆ. ಪುನೀತ ಪುಣ್ಯಾಶ್ರಮದ ಪಲ್ಲವಿ ಸಿಂಧನೂರ, ಪಯಣ ಸಂಸ್ಥೆಯ ಚಾಂದಿನಿ, ಕಾರಾಗೃಹ ಸಂದರ್ಶಕ ಸಮಿತಿಯ ನಿರ್ಮಲಾ ತರವಾಡೆ, ಸೃಷ್ಟಿ ಸಂಕುಲ ಸಂಸ್ಥೆಯ ಆದಿತ್ಯ ಬಾಂಡಗೆ, ಕಾರಾಗೃಹ ಸಂದರ್ಶಕ ಸಮಿತಿಯ ಸದಸ್ಯರಾದ ಬಸವರಾಜ ನೆಲಜೇರಿ, ಗಣೇಶ ಮೇರವಾಡೆ, ಸವಿತಾ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬನ್ನಿ, ನಾಟಕ ನೋಡೋಣ- ಕಲಾವಿದರನ್ನು ಗೌರವಿಸೋಣ
– ಬಸವರಾಜ ನೆಲಜೇರಿ.
ರಂಗ ನಿರ್ದೇಶಕರು, ಗದಗ.