ವಿಜಯಸಾಕ್ಷಿ ಸುದ್ದಿ, ಗದಗ : ಸ್ವಾಮಿ ವಿವೇಕಾನಂದ ಅವರ ಕಂಚಿನ ಪುತ್ಥಳಿ ನೋಡಿದಾಕ್ಷಣ ಅವರ ಸಂದೇಶ ಹಾಗೂ ಮಿಚಿನಂತೆ ಹೊರಹುಮ್ಮುವ ಅವರ ನುಡಿಗಳು ಯುವಕರಿಗೆ ದಾರಿದೀಪವಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯದಲ್ಲಿ ಬುಧವಾರ ವಿಶ್ವ ಚೇತನ ಸ್ವಾಮಿ ವಿವೇಕಾನಂದ ಅವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಸಚಿವರು ಮಾತನಾಡಿದರು.
ನಿರ್ಭಯಾನಂದ ಅವರ ಪ್ರೇರಣೆ ಮತ್ತು ಶಕ್ತಿ ಪಡೆದು ಅಂದಿನ ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ, ಮಾಜಿ ಶಾಸಕ ಡಿ.ಆರ್. ಪಾಟೀಲ ಅವರ ಸತತ ಪ್ರಯತ್ನವು ಇದಕ್ಕೆ ಸಾಕ್ಷಿಯಾಗಿದೆ. ಪುತ್ಥಳಿ ನೋಡಿದಾಕ್ಷಣ ವಿವೇಕಾನಂದರು ನೀಡಿರುವ ಸಂದೇಶಗಳು ನೆನಪಾಗುತ್ತವೆ. ಅದರಿಂದ ಸಹಜವಾಗಿ ಪ್ರೇರಣೆ ಬರುತ್ತದೆ.
ಗದಗದಲ್ಲಿರುವ ಐತಿಹಾಸಿಕ ಪ್ರಸಿದ್ಧ ಸ್ಥಳವಾದ ವೀರನಾರಾಯಣ ದೇವಸ್ಥಾನ ನೋಡಲು ಬಂದವರು ವಿಶ್ವವಿದ್ಯಾಲಯದ ಸಬರಮತಿ ಆಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ. ಗಾಂಧಿ ದರ್ಶನ ಮುಗಿಸಿ ಗ್ರಾಮೀಣ ಕಲೆಯ ನೋಡಿಕೊಂಡು ಹೋರಬಂದಾಗ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸಿದಂತಾಗುತ್ತದೆ. ಹಾಗೇಯೇ ವಿಶ್ವ ಚೇತನ ಸ್ವಾಮಿ ವಿವೇಕಾನಂದ ಅವರ ಪುತ್ಥಳಿ ನೋಡಿ ಅದರ ಹತ್ತಿರಕ್ಕೆ ಹೋದಾಗ ಎಲ್ಲರಿಗೂ ಪ್ರೇರಣೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿ.ಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಹೆಮ್ಮಯ ಮತ್ತು ಗರ್ವದ ಸಂಗತಿ. ಈ ಮೂಲಕ ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ನೀಡುಲು ಪ್ರೇರಣೆಯಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ವಿಶಾಲ ಜಿಲ್ಲೆಗಳನ್ನು ವಿಂಗಡಿಸಿ ಹೊಸ ಜಿಲ್ಲೆಗಳನ್ನು ಮಾಡಿದರ ಪೈಕಿ ಗದಗ ಜಿಲ್ಲೆಯೂ ಅತ್ಯಂತ ಪ್ರಗತಿಪರ ಮತ್ತು ಮಾದರಿ ಜಿಲ್ಲೆಯಾಗಿ ಹೊರಹೊಮ್ಮಿದೆ. ಅಂತಹ ಜಿಲ್ಲೆಯಲ್ಲಿ ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯ ಸ್ಥಾಪಿಸಿದ ಕೀರ್ತಿ ಸಚಿವ ಎಚ್.ಕೆ. ಪಾಟೀಲರಿಗೆ ಸಲ್ಲುತ್ತದೆ. ಅಂತಹ ವಿಶ್ವವಿದ್ಯಾಲಯದಲ್ಲಿ ಅನಾವರಣಗೊಂಡಿರುವ ಸ್ವಾಮಿ ವಿವೇಕಾನಂದರ ಮೂರ್ತಿಯ ಸ್ಪೂರ್ತಿಯಿಂದ ಎಲ್ಲಾ ವಿದ್ಯಾರ್ಥಿಗಳು ಶ್ರೇಷ್ಠ ವ್ಯಕ್ತಿಗಳಾಗಿ ತಂದೆ-ತಾಯಿ, ಗುರುಗಳ ಪ್ರೀತಿ ವಿಶ್ವಾಸ ಗಳಿಸಬೇಕು. ಶಿಕ್ಷಣ ವ್ಯವಸ್ಥೆ ಕೇವಲ ಪಾಠ ಪ್ರವಚನಕ್ಕೆ ಸೀಮಿತವಾಗಿದೆ ಬಸವಣ್ಣ, ಗಾಂಧೀಜಿಯಂತಹ ಮಹನೀಯರ ಜೊತೆಗೆ ಹೋರಾಟಗಾರರ ಮಾರ್ಗದರ್ಶನಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ವಿಡಿಯೋ ಸಂದೇಶದ ಮೂಲಕ ಮಾತನಾಡಿ, 1893ರಲ್ಲಿ ಸ್ವಾಮಿ ವಿವೇಕಾನಂದರು ದೇಶದ ಸಂಸ್ಕೃತಿ, ಧರ್ಮವನ್ನು ಮತ್ತು ಆಧ್ಯಾತ್ಮವನ್ನು ವಿಶ್ವಕ್ಕೆ ಪ್ರಚುರಪಡಿಸಿದ್ದಾರೆ. ಅವರ ಪ್ರೇರಣೆಯ ನುಡಿ, ತತ್ವ-ಸಿದ್ಧಾಂತವು ಇಂದಿನ ಯುವಕರಿಗೆ ದಾರಿ ದೀಪವಾಗಿದೆ. ಹಾಗಾಗಿ ಇಂದು ಆರ್‌ಡಿಪಿಆರ್ ವಿಶ್ವವಿದ್ಯಾಲಯದಲ್ಲಿ ಅನಾವರಣಗೊಂಡಿರುವ ವಿಶ್ವ ಚೇತನ ಸ್ವಾಮಿ ವಿವೇಕಾನಂದರ ಕಂಚಿನ ಪುತ್ಥಳಿ ಎಲ್ಲರಿಗೂ ನವ ಉತ್ಸಾಹವನ್ನು ತುಂಬಲಿ ಎಂದು ಸಂದೇಶ ನೀಡಿದರು.
ಗದುಗಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ನಿರ್ಭಯಾನಂದ ಸ್ವಾಮೀಜಿ ಮಾತನಾಡಿ, ಸ್ವಾಮಿ ವಿವೇಕಾನಂದರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಿ ಆಧಾರ ರಹಿತ ವಿಚಾರವನ್ನು ಮಾಡುತ್ತಾರೆ. ಆದರೆ ಸ್ವಾಮಿ ವಿವೇಕಾನಂದರು ಯಾವುದೇ ದೇವರು ಅಥವಾ ಧರ್ಮವನ್ನು ನಂಬುವುದಿಲ್ಲ. ಅವರ ಉದ್ದೇಶ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಅಸಮಾನ್ಯ ವ್ಯಕ್ತಿಯನ್ನಾಗಿಸುವುದು ಮತ್ತು ಆತನಲ್ಲಿರುವ ಅನಂತ ಶಕ್ತಿಯನ್ನು ತಿಳಿಸಿಕೊಟ್ಟು ಸಾಧನಾ ಕಾರ್ಯ ಮಾಡಿಸುವುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ `ಗ್ರಾಮೋದಯ’ ತ್ರೈಮಾಸಿಕ ಪತ್ರಿಕೆಯನ್ನುವ ಮತ್ತು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪೊಸ್ಟರ್ ಅನ್ನು ಬಿಡುಗಡೆ ಗೊಳಿಸಿದರು. ಸಮಾರಂಭದಲ್ಲಿ ವಿ.ಪ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಪ್ರೊ. ಬಿ.ತಿಮ್ಮೇಗೌಡ, ಅನಸವ್ವ ಸುರೇಶ್ ಪವಾರ, ಅನಸೂಯಾ ಬಾಳಪ್ಪ ಇದ್ದರು. ಕಾರ್ಯಕ್ರಮವನ್ನು ಪ್ರಕಾಶ ಮಾಚೇನಹಳ್ಳಿ ನಿರೂಪಿಸಿದರು, ಪ್ರಶಾಂತ ಜೆ.ಸಿ. ವಂದಿಸಿದರು.
ವಿಶ್ವ ವಿದ್ಯಾಲಯದ ಪ್ರಭಾರಿ ಕುಲಪತಿ ಸುರೇಶ ನಾಡಗೌಡರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ವಿಶ್ವ ವಿದ್ಯಾಲಯದಲ್ಲಿ ಸಬರಮತಿ ಆಶ್ರಮ ನಿರ್ಮಿಸಿ ಗಾಂಧಿಯವರ ಆಶಯ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ನೀಡುಲಾಗುತ್ತಿದ್ದು, ಜೊತೆಗೆ ಸ್ವಾಮಿ ವಿವೇಕಾನಂದರ ಜೀವಿತಾವಧಿ ಪ್ರತಿಬಿಂಬಿಸುವ 39.5 ಅಡಿಯ ಕಂಚಿನ ಪುತ್ಥಳಿ ಸ್ಥಾಪಸಿ ಅವರ ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ಹೇಳಿದರು.
ಇದೇ ದಿನಾಂಕದಂದು ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಭಾಷಣ ಮಾಡಿ ಜಗತ್ತನ್ನೇ ಆಕರ್ಷಿಸಿದ್ದರು. ಹಾಗಾಗಿ ಅದೇ ದಿನದಂದು ಆರ್‌ಡಿಪಿಆರ್ ವಿಶ್ವವಿದ್ಯಾಲಯದಲ್ಲಿ ವಿವೇಕಾನಂದರ ಕಂಚಿನ ಪುತ್ಥಳಿ ಅನಾವರಣಗೊಂಡಿರುವುದು ಯೋಗಾಯೋಗವಾಗಿದೆ. ಇದು ಎಲ್ಲರ ಸೌಭಾಗ್ಯ ಮತ್ತು ಅಭಿವೃದ್ಧಿಯ ಶುಭ ಚಿಹ್ನೆಯಾಗಿದೆ. ಮಿಂಚಿನಂತೆ ಹೊರಹೊಮ್ಮುವ ವಿವೇಕಾನಂದರ ದಿಟ್ಟ ಮಾತುಗಳನ್ನು ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಭಾಗದ ಯುವಜನರು ಓದಿ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡು, ಗ್ರಾಮಗಳ ಉದ್ಧಾರಕ್ಕೆ ಕೈಜೋಡಿಸುವಂತಾಗಬೇಕು.
– ಎಚ್.ಕೆ. ಪಾಟೀಲ.
ಗದಗ ಜಿಲ್ಲಾ ಉಸ್ತುವಾರಿ ಸಚಿವರು.