ಲಖನೌ:- ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶ ಸಿಎಂ ಯೋಗಿ ದಿಟ್ಟ ಕ್ರಮ ಕೈಗೊಂಡಿದ್ದು, ಇನ್ನು ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ಗ್ಯಾರಂಟಿ ಎನ್ನಲಾಗಿದೆ.
ಲವ್ ಜಿಹಾದ್‌ನಲ್ಲಿ ತೊಡಗುವವರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವ ಉತ್ತರ ಪ್ರದೇಶ ಕಾನೂನು ಬಾಹಿರ ಧಾರ್ಮಿಕ ಮತಾಂತರ ವಿಧೇಯಕಕ್ಕೆ ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ರಾಜ್ಯಪಾಲರ ಅಂಕಿತ ಸಿಕ್ಕರೆ ವಿಧೇಯಕವು ಕಾಯ್ದೆಯಾಗಿ ಜಾರಿಗೆ ಬರಲಿದೆ. ಕಾಯ್ದೆ ಜಾರಿಯಾದರೆ, ಲವ್ ಜಿಹಾದ್‌ನಲ್ಲಿ ತೊಡಗಿಸಿಕೊಂಡವರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.
ಉತ್ತರ ಪ್ರದೇಶದ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ 2021ರಲ್ಲಿ ಬಲವಂತದ ಮತಾಂತರಕ್ಕೆ 1ರಿಂದ 10 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿತ್ತು. ಹೊಸ ಮಸೂದೆಯಡಿ ಮೋಸ ಅಥವಾ ಸುಳ್ಳಿನ ಮೂಲಕ ನಡೆಸುವ ಮತಾಂತರಗಳನ್ನು ಸಹ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ. ಸ್ವಯಂಪ್ರೇರಿತ ಮತಾಂತರಕ್ಕಾಗಿ ವ್ಯಕ್ತಿಗಳು ಎರಡು ತಿಂಗಳ ಮುಂಚಿತವಾಗಿ ಮ್ಯಾಜಿಸ್ಟ್ರೇಟ್‌ಗೆ ತಿಳಿಸಬೇಕು. ಇಲ್ಲದಿದ್ದರೆ 6 ತಿಂಗಳಿನಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 10,000 ರೂ. ವಿಧಿಸಲಾಗುತ್ತದೆ.
ಈ ಮಸೂದೆ ಪ್ರಕಾರ ಬಲವಂತದ ಅಥವಾ ಮೋಸದ ಮತಾಂತರಕ್ಕೆ 1ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು 15,000 ರೂ. ದಂಡ ವಿಧಿಸಲು ಪ್ರಸ್ತಾವಿಸುತ್ತದೆ. ಅಪ್ರಾಪ್ತ ವಯಸ್ಕರು, ಮಹಿಳೆಯರು ಅಥವಾ ಎಸ್‌ಸಿ-ಎಸ್‌ಟಿ ಸಮುದಾಯದ ಸದಸ್ಯರನ್ನು ಮತಾಂತರ ಮಾಡಿದರೆ ಶಿಕ್ಷೆಯ ಪ್ರಮಾಣ ಹೆಚ್ಚಲಿದೆ. ಅಂತಹ ಸಂದರ್ಭದಲ್ಲಿ 3ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸುವ ಸಾಧ್ಯತೆ ಇದೆ.
ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಲವ್ ಜಿಹಾದ್ ವಿರುದ್ಧ ಹಿಂದಿನಿಂದಲೂ ಕಠಿಣ ನಿಲುವು ತಾಳಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಲವ್ ಜಿಹಾದ್ ಅನ್ನು ಪ್ರಮುಖ ವಿಷಯವಾಗಿ ಕೈಗೆತ್ತಿಕೊಂಡಿತ್ತು. ಅಂದಿನಿಂದ ಈ ಸಮಸ್ಯೆಯನ್ನು ಪರಿಹರಿಸಲು ಕಠಿಣ ಕಾನೂನುಗಳನ್ನು ರಚಿಸಲು ಸರ್ಕಾರ ಬದ್ಧವಾಗಿದೆ. ಹೊಸ ಮಸೂದೆಯು ಸಂತ್ರಸ್ತರ ವೈದ್ಯಕೀಯ ವೆಚ್ಚಗಳನ್ನು ಸರಿದೂಗಿಸಲು ಹಣಕಾಸಿನ ನೆರವು ನೀಡುವ ನಿಬಂಧನೆಗಳನ್ನೂ ಒಳಗೊಂಡಿದೆ