ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಉತ್ತರ ಕರ್ನಾಟಕ ಭಾಗದ ಸಾರ್ವಜನಿಕ ಪ್ರಯಾಣಿಕರ ಸಂಚಾರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸುವುದರ ಜೊತೆಗೆ ನಗದು ರಹಿತ ವ್ಯವಹಾರ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಟಿಕೆಟ್ ವಿತರಣೆಗೆ ಯುಪಿಐ ಮೂಲಕ ಹಣ ಸ್ವೀಕೃತಿ ವ್ಯವಸ್ಥೆಯನ್ನು ಹುಬ್ಬಳ್ಳಿ-ಗ್ರಾಮಾಂತರ ವಿಭಾಗದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿತ್ತು.
ಚಿಲ್ಲರೆ ಸಮಸ್ಯೆ ಪರಿಹಾರ, ನಗದು ರಹಿತ ಪ್ರಯಾಣ ಹಾಗೂ ಸಮಯದ ಉಳಿತಾಯ ಮುಂತಾದ ಪ್ರಯೋಜನಗಳಿಂದಾಗಿ ಸಾರ್ವಜನಿಕರಿಂದ ಹಾಗೂ ಸಂಸ್ಥೆಯ ಸಿಬ್ಬಂದಿಗಳಿಂದ ನಿರೀಕ್ಷೆಗೂ ಮೀರಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಫೆ.3ರಂದು ಗದುಗಿನಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸಂಸ್ಥೆಯ ಬಸ್ಸುಗಳಲ್ಲಿ ನಗದು ರಹಿತ ವ್ಯವಸ್ಥೆ ಜಾರಿಗೊಳಿಸುವ ಸಮಾರಂಭದಲ್ಲಿ ಯುಪಿಐ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ.
ಪ್ರಸ್ತುತ ಸಂಸ್ಥೆಯಲ್ಲಿ ಪ್ರತಿದಿನ ಅಂದಾಜು 15 ಸಾವಿರ ವಹಿವಾಟುಗಳಿಂದ ಒಟ್ಟು ಸುಮಾರು 14 ಲಕ್ಷ ರೂ ಆದಾಯ ಸಂಗ್ರಹವಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 2.59 ಲಕ್ಷ ವಹಿವಾಟುಗಳಿಂದ ಒಟ್ಟು ರೂ.3.79 ಕೋಟಿ ಸಂಗ್ರಹವಾಗಿದೆ. ಸಂಸ್ಥೆಯ ವಾಹನಗಳಲ್ಲಿ ನಗದು ರಹಿತ ಯುಪಿಐ ವಹಿವಾಟುಗಳ ಮೂಲಕ ಟಿಕೆಟ್ ವಿತರಣೆಯನ್ನು ಪ್ರೋತ್ಸಾಹಿಸಲು ಮಾರ್ಚ್ ೩ರಿಂದ ಯುಪಿಐ ವಹಿವಾಟು ಪಾಕ್ಷಿಕವನ್ನು ಎಲ್ಲ ವಿಭಾಗ/ಘಟಕಗಳಲ್ಲಿ ಆಚರಿಸಲಾಗುತ್ತಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. (ಭಾ.ಆ.ಸೇ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದರಿ ವ್ಯವಸ್ಥೆಯನ್ನು ಎಲ್ಲ ಘಟಕಗಳಲ್ಲಿ ಅಳವಡಿಸುವ ಕಾರ್ಯ ಫೆ.16ರಂದು ಮುಕ್ತಾಯಗೊಂಡಿದೆ. ಸಂಸ್ಥೆಯ 50 ಘಟಕಗಳ ಸಾರಿಗೆಗಳಲ್ಲಿ ಸದರಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರು ಮತ್ತು ಚಾಲನಾ ಸಿಬ್ಬಂದಿಗಳ ನಡುವೆ ಚಿಲ್ಲರೆ ಸಮಸ್ಯೆ ಉಂಟಾಗುವುದನ್ನು ತಡೆಯಬಹುದಲ್ಲದೇ ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡಿದಂತಾಗುತ್ತದೆ.