ಮೈಸೂರು: ಸುಪ್ರೀಂ ನಿಂದ ರಿಲೀಫ್ ಸಿಕ್ಕರೂ ಸದ್ಯಕ್ಕೆ ಮುಡಾ ಸೈಟ್ ವಾಪಸ್ ಕೇಳಲ್ಲ ಎಂದು ಸಿಎಂ ಪುತ್ರ ಯತೀಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ. ಮುಡಾ ಹಗರಣದಲ್ಲಿ ಇ.ಡಿ ವಿಚಾರಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಿಂದ ಸಿಎಂ ಪತ್ನಿಗೆ ರಿಲೀಫ್ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್‌ನಿಂದ ರಿಲೀಫ್ ಸಿಕ್ಕರೂ ನಾವು ಈ ಸಂದರ್ಭದಲ್ಲಿ ಮುಡಾದಿಂದ 14 ಸೈಟ್ ವಾಪಸ್ ಕೇಳುವುದಿಲ್ಲ. ಇನ್ನೂ ಕೂಡ ಈ ವಿಚಾರದ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಮುಗಿದು ಆ ತೀರ್ಪು ಹೊರಬರಲಿ. ಆ ನಂತರ ಇದರ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಸದ್ಯಕ್ಕೆ ಮುಡಾದಿಂದ ಸೈಟ್‌ಗಳನ್ನ ವಾಪಸ್ ಕೇಳುವುದಿಲ್ಲ ಎಂದು ತಿಳಿಸಿದರು.
ಆ ಸೈಟ್‌ಗಳಿಂದಲೇ ತಂದೆಯ ರಾಜಕೀಯಕ್ಕೆ ಕಪ್ಪುಚುಕ್ಕೆ ಬಂತು ಎಂಬ ನೋವು ನಮ್ಮ ತಾಯಿಗೆ ಇದೆ. ಹೀಗಾಗಿ, ಅವುಗಳನ್ನು ಆ ಸಂದರ್ಭದಲ್ಲಿ ವಾಪಸ್ ಕೊಟ್ಟರು. ಸುಪ್ರೀಂ ಕೋರ್ಟ್ ಈಗ ಈ ವಿಚಾರದಲ್ಲಿ ರಿಲೀಫ್ ಕೊಟ್ಟರು ಕೂಡ ನಾವು ಅದನ್ನ ವಾಸಸ್ ಕೇಳುವುದಿಲ್ಲ. ಈ ಸೈಟ್‌ಗಳಲ್ಲಿ ಮನಿ ಲಾಂಡರಿಂಗ್ ಪ್ರಶ್ನೆಯೇ ಇಲ್ಲ. ಆದರೂ ಮನಿ ಲಾಂಡರಿಂಗ್ ಕೇಸ್ ಹಾಕಿದ್ರು. ಇದರಿಂದ ತಾಯಿ ಮನನೊಂದು ಸೈಟ್‌ಗಳನ್ನ ವಾಪಸ್ ಕೊಟ್ಟರು. ಕಾನೂನು ಪ್ರಕ್ರಿಯೆ ಮುಗಿಯಲಿ. ಆಮೇಲೆ ನೋಡೋಣ ಎಂದರು