ಬೆಂಗಳೂರು: ನಗರದಲ್ಲಿ ನಡೆದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದ ವೇಳೆ ಶಾಸಕ ಮುನಿರತ್ನ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ವಾಗ್ವಾದ ತೀವ್ರ ರೂಪ ಪಡೆದುಕೊಂಡಿತು.
ಕಾರ್ಯಕ್ರಮದ ವೇಳೆ ಮುನಿರತ್ನ ಗಂಭೀರ ಆರೋಪ:-
ಚನ್ನಪಟ್ಟಣ ಮತ್ತು ಕನಕಪುರದಿಂದ ರೌಡಿಶೀಟರ್‌ಗಳನ್ನು ಕರೆಸಿ ನನ್ನ ಮೇಲೆ ಹಲ್ಲೆ ನಡೆದಿದೆ. ನನ್ನ ಪ್ರಾಣ ಉಳಿದಿರುವುದು ಪೊಲೀಸರಿಂದ. ಕಾಂಗ್ರೆಸ್ ಸರ್ಕಾರ ನನ್ನ ವಿರುದ್ಧ ರಾಜಕೀಯ ಪ್ರಕರಣಗಳನ್ನು ರಚಿಸಲು ಯತ್ನಿಸುತ್ತಿದೆ. ನಾನು ರಾಜೀನಾಮೆ ನೀಡಲ್ಲ, ಸತ್ತರೂ ಇಲ್ಲಿಯೇ ಸಾಯುತ್ತೇನೆ,” ಎಂದು ಅವರು ಕಿಡಿಕಾರಿದರು.
ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿಲ್ಲ ಎಂದು ಮೂರು ದಿನ ಹಿಂದೆ ನಾನು ಸುದ್ದಿಗೋಷ್ಠಿ ಮಾಡಿ ಹೇಳಿದ್ದೇನೆ. ಸುದ್ದಿಗೋಷ್ಠಿ ಬಳಿಕವಾದರೂ ಸಂಸದರಿಗೆ, ಶಾಸಕರಿಗೆ ಆಹ್ವಾನ ಮಾಡಬೇಕಿತ್ತು. ಆಹ್ವಾನ ನೀಡದ್ದಕ್ಕೆ ನಾನು ಪ್ರಶ್ನೆ ಮಾಡಿದ್ದೇನೆ. ಸರ್ಕಾರಿ ಕಾರ್ಯಕ್ರಮ ಆಗಿರುವ ಕಾರಣ ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕ, ಸಂಸದರ ಫೋಟೋ ಹಾಕಬೇಕು. ಆದರೆ ಎಲ್ಲಿಯೂ ಫೋಟೋ ಹಾಕಿಲ್ಲ. ಇದು ಕಾಂಗ್ರೆಸ್ ಕಾರ್ಯಕ್ರಮವೇ ಅಥವಾ ಸರ್ಕಾರಿ ಕಾರ್ಯಕ್ರಮವೇ? ಇದನ್ನು ಪ್ರಶ್ನೆ ಮಾಡಿದರೆ ನನ್ನ ಮೇಲೆ ಹಲ್ಲೆ ಮಾಡುತ್ತಾರೆ ಎಂದರು.
ಈ ಆರೋಪಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ “ಇದು ಸರ್ಕಾರದ ಶಿಲಾನ್ಯಾಸ ಕಾರ್ಯಕ್ರಮವಲ್ಲ, ಸಾರ್ವಜನಿಕರ ಸಮಸ್ಯೆ ಆಲಿಸುವ ಜನಸಂವಾದ. ಎಲ್ಲರಿಗೂ ಸಮಾನ ಗೌರವ ನೀಡಲಾಗಿದೆ. ಆದರೆ, ಮುನಿರತ್ನ ಈ ಕಾರ್ಯಕ್ರಮ ಹಾಳುಮಾಡಲು ಉದ್ದೇಶಪೂರ್ವಕವಾಗಿ ಬಂದಿದ್ದರು. ಇಂಥವರನ್ನು ಗೆಲ್ಲಿಸಿದ್ದು ಮತದಾರರ ತಪ್ಪು,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್ ಸಂಸ್ಥೆಗೆ ಅಗೌರವ ತರುವ ಕೆಲಸ ಮುನಿರತ್ನ ಮಾಡಿದ್ದಾರೆ. ಆರ್‌ಎಸ್‌ಎಸ್‌ಗೆ ಒಂದು ಇತಿಹಾಸ ಇದೆ ಅವರೇನು ಮಾಡಬೇಕು ಮಾಡುತ್ತಿದ್ದಾರೆ. ಅವರ ಹೆಸರನ್ನು ಕೆಡಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಜಿಬಿಎ ಸಭೆಗೆ ಬಂದಿಲ್ಲ. ಅಲ್ಲಿ ಬಂದು ಸಮಸ್ಯೆ ಹೇಳಿಲ್ಲ. ಇಲ್ಲಿ ಬಂದು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಮುನಿರತ್ನ ವಿರುದ್ದ ಡಿಕೆಶಿ ಕಿಡಿಕಾರಿದರು.