ಬೆಂಗಳೂರು: ಹೆಚ್‌ಎಎಲ್ ಪ್ರದೇಶದಲ್ಲಿ ನಡೆದ ರೋಡ್ ರೇಜ್ ಪ್ರಕರಣವು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. ಗಾಡಿ ಟಚ್ ಆದ ವಿಚಾರದಲ್ಲಿ ಆರಂಭವಾದ ಗಲಾಟೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಕಾರು ಚಾಲಕ ಗೂಡ್ಸ್ ವಾಹನ ಚಾಲಕನನ್ನು ಕಾರಿನ ಬ್ಯಾನೆಟ್ ಮೇಲೆಯೇ ಎಳೆದುಕೊಂಡು ಹೋಗಿರುವ ಘಟನೆ ಬುಧವಾರ ಮಧ್ಯಾಹ್ನ 12:45ರ ಸುಮಾರಿಗೆ ನಡೆದಿದೆ.
ಕೆಎ 03 ಎನ್‌ಎನ್ 4501 ನೋಂದಣಿಯ ಮಾರುತಿ ಸುಜುಕಿ ಕಾರು ಚಾಲಕ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ವ್ಯಕ್ತಿ ಕಿರುಚಾಡುತ್ತಿದ್ದರೂ ಕಾರು ನಿಲ್ಲಿಸದೆ ಸುಮಾರು ಒಂದು ಕಿಲೋಮೀಟರ್ ದೂರ ಚಲಾಯಿಸಲಾಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ನಗರದಲ್ಲಿ ಹೆಚ್ಚುತ್ತಿರುವ ರೋಡ್ ರೇಜ್ ಘಟನೆಗಳು ಸಂಚಾರ ಶಿಸ್ತು ಹಾಗೂ ಸಾರ್ವಜನಿಕ ಸುರಕ್ಷತೆ ಕುರಿತು ಮತ್ತೊಮ್ಮೆ ಪ್ರಶ್ನೆ ಎತ್ತಿವೆ.



