ತುರ್ತು ಕ್ಯಾಬಿನೆಟ್ ಸಭೆ ಕರೆಯಲು ಒತ್ತಾಯ

0
hkp
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನದಿ ಪಾತ್ರಗಳಲ್ಲೂ ಕುಡಿಯುವ ನೀರಿನ ಕೊರತೆ ಉಲ್ಬಣಿಸಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವ ಕಾರಣ ತುರ್ತಾಗಿ ಕ್ಯಾಬಿನೆಟ್ ಸಭೆ ಕರೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಬ್ಯಾರೇಜ್‌ಗೆ ಗುರುವಾರ ಭೇಟಿ ನೀಡಿದ ಅವರು, ಬ್ಯಾರೇಜ್‌ನಲ್ಲಿರುವ ನೀರಿನ ಲಭ್ಯತೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಸದ್ಯದ ಮಾಹಿತಿ ಪ್ರಕಾರ ಭದ್ರಾ ಡ್ಯಾಂನಲ್ಲಿ ಕೇವಲ 8 ಟಿಎಂಸಿ ಅಡಿ ನೀರು ಮಾತ್ರ ಇದೆ. ಅಲ್ಲಿಂದ ಸಿಂಗಟಾಲೂರು ಬ್ಯಾರೇಜ್‌ಗೆ ನೀರು ಹರಿಸುವಂತೆ ಕೋರಲಾಗಿದೆ. ನೀರಿನ ಸಮಸ್ಯೆ ಬಿಗಡಾಯಿಸಿದ್ದರಿಂದ ಚುನಾವಣೆ ಸಂದರ್ಭದಲ್ಲೂ ಸಾಕಷ್ಟು ಒತ್ತಡ ಹೇರಿದ್ದೆವು. ಆದರೆ, ಆ ಸಮಯದಲ್ಲಿ 0.4 ಟಿಎಂಸಿ ಅಡಿ ನೀರು ಮಾತ್ರ ಹರಿದು ಬಂದಿತ್ತು ಎಂದು ತಿಳಿಸಿದರು.

ಪ್ರಸ್ತುತ ಹಮ್ಮಿಗಿ ಬ್ಯಾರೇಜ್‌ನಲ್ಲಿ ನೀರಿನ ಲಭ್ಯತೆಯ ಪ್ರಮಾಣ ತೀರಾ ಕಡಿಮೆ ಇದೆ. ಕುಡಿಯುವ ನೀರಿಗಾಗಿ ಡೆಡ್ ಸ್ಟೋರೇಜ್ ನೀರನ್ನು ಬಳಸಲಾಗುತ್ತಿದೆ. ನಾಲ್ಕು ಇಂಚಿನ 13 ಪಂಪ್‌ಗಳು ಸತತವಾಗಿ ಡೆಡ್ ಸ್ಟೋರೇಜ್‌ನಿಂದ ಅವಳಿ ನಗರಕ್ಕೆ ನೀರು ಪೂರೈಸುವ ಲಿಫ್ಟಿಂಗ್ ಪಾಯಿಂಟ್‌ಗೆ ಕಳಿಸುತ್ತಿವೆ. ಹಿಟಾಚಿಯಲ್ಲಿ ಹೂಳು ತೆಗೆಸಿ ಕಾಲುವೆ ಮೂಲಕ ಡೆಡ್ ಸ್ಟೋರೇಜ್ ಕೊನೆವೆರೆಗೆ ನೀರು ಪಡೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ನಗರಸಭೆ ಮಾಜಿ ಅಧ್ಯಕ್ಷ ಬಿ.ಬಿ. ಅಸೂಟಿ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಎಸ್.ಎನ್. ಬಳ್ಳಾರಿ, ಉಮರಫಾರೂಖ್ ಹುಬ್ಬಳ್ಳಿ ಸೇರಿದಂತೆ ಗದಗ-ಬೆಟಗೇರಿ ನಗರಸಭೆ ಇಂಜಿನಿಯರ್‌ಗಳು, ಅಧಿಕಾರಿಗಳು ಹಾಜರಿದ್ದರು.

ಹಮ್ಮಿಗಿ ಬ್ಯಾರೇಜ್‌ನಲ್ಲಿರುವ ನೀರು ಮುಂದಿನ 4ರಿಂದ ೮ದಿನಗಳವರೆಗೆ ಬರಬಹುದು. ಬಳಿಕ ಮಳೆ ಆಗದಿದ್ದರೆ ನೀರಿನ ಕೊರತೆ ಉಂಟಾಗಲಿದೆ. ನೀರು ಅತ್ಯಮೂಲ್ಯವಾಗಿದ್ದು, ಯಾರೂ ನೀರನ್ನು ವ್ಯರ್ಥ ಮಾಡಬೇಡಿ ಎಂದು ಮನವಿ ಮಾಡಿದರಲ್ಲದೆ, ಮುಂದಿನ ದಿನಗಳಲ್ಲಿ ಮಳೆಯಾದರೆ ನೀರಿಗೆ ಸಮಸ್ಯೆ ಆಗಲಾರದು. ಕೆಟ್ಟು ಹೋಗಿರುವ ಕೊಳವೆಬಾವಿಗಳ ರಿಪೇರಿಗೆ ಕ್ರಮ ವಹಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

 


Spread the love

LEAVE A REPLY

Please enter your comment!
Please enter your name here