ಹಾಸನ: ಮತ್ತೆ ಹಾಸನ ನಗರದ ವಿದ್ಯಾನಗರ ಬಡಾವಣೆಯಲ್ಲಿ ನಿವೇಶನದ ಮಾಲೀಕತ್ವ ವಿಚಾರವಾಗಿ ನಟ ಯಶ್ ಅವರ ತಾಯಿ ಪುಷ್ಪಾ ಮತ್ತು ಜಿಪಿಎ ಹೋಲ್ಡರ್ ದೇವರಾಜು ನಡುವೆ ತೀವ್ರ ವಾಗ್ವಾದ ನಡೆಯಿತು. ಈ ಹಿಂದೆ ಕೆಡವಲಾಗಿದ್ದ ಕಾಂಪೌಂಡ್ ಅನ್ನು ಪುಷ್ಪಾ ಅರುಣ್ ಕುಮಾರ್ ಅವರು ಮರುನಿರ್ಮಿಸಲು ಮುಂದಾದಾಗ ಜಾಗದ ಮಾಲೀಕರೊಂದಿಗೆ ವಾಗ್ವಾದ ನಡೆದಿದೆ.
ನಿವೇಶನದ ಮಾಲೀಕ ದೇವರಾಜು ಅವರ ಬಳಿ ಮಾಲೀಕತ್ವದ ದಾಖಲೆಗಳನ್ನು ನೀಡುವಂತೆ ಪುಷ್ಪಾ ಅವರು ಒತ್ತಾಯಿಸಿದ್ದು, ದೇವರಾಜು ಅವರು ಕೋರ್ಟ್ ಆದೇಶದಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪುಷ್ಪಾ ಅರುಣ್ ಕುಮಾರ್, ಜಡ್ಜ್‌ನನ್ನೇ ಇಲ್ಲಿಗೆ ಕರೆಸಿ ಇಲ್ಲಿಯೇ ತೀರ್ಮಾನ ಮಾಡಲಿ ಎಂದು ಹೇಳಿದ್ದಾರೆ.
ಜೊತೆಗೆ ಯಶ್ ಮನೆ ಮುಂದೆ ಕ್ಯಾಮೆರಾ ಹಿಡಿದು ಬಿಲ್ಡಪ್ ಪಡೆಯಲು ಬಂದಿದ್ದೀರಾ ಎಂದು ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ.ಘಟನೆಯ ಮಾಹಿತಿ ಪಡೆದ ಬಡಾವಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅವರ ಎದುರು ಕೂಡ ಪುಷ್ಪಾ ಅರುಣ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವರಾಜು ಅವರನ್ನು ಏಕೆ ಬಂಧಿಸಿಲ್ಲ ಮತ್ತು ಜೆಸಿಬಿಯನ್ನು ಏಕೆ ಸೀಜ್ ಮಾಡಿಲ್ಲ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ.
ಈ ವೇಳೆ ಮಾಧ್ಯಮದವರು ವಿಡಿಯೋ ಚಿತ್ರೀಕರಣ ಮಾಡದಂತೆ ಪುಷ್ಪಾ ಅವರು ತಾಕೀತು ಮಾಡಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿದ್ದ ಕಾರ್ಮಿಕರನ್ನು ತೆರವುಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.



