ವಿಜಯಸಾಕ್ಷಿ ಸುದ್ದಿ, ಗದಗ: ಎಚ್.ಟಿ. ಗ್ರಾಹಕರು ತಮ್ಮ ಉದ್ಯಮಗಳಿಗೆ ಅವಶ್ಯಕತೆ ತಕ್ಕಂತೆ ವಿದ್ಯುತ್ ಬಳಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಎಚ್.ಟಿ. ವಿದ್ಯುತ್ ಗ್ರಾಹಕರು ಸಿಜನಲ್ ಬೆಳೆಗಳ ಕೈಗಾರಿಕೆಗಳಿಗೆ ವರ್ಷದಲ್ಲಿ ಎರಡು ಬಾರಿ ಸಿಜನಲ್ ವಿದ್ಯುತ್ ಬಳಕೆ ಕಡಿಮೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಇಲಾಖೆಯಿಂದ ಎಚ್.ಟಿ. ಗ್ರಾಹಕರಿಗೆ ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ನೀಡಲಾಗುತ್ತದೆ ಮತ್ತು ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ಪಾವತಿ ಮಾಡುವುದರಿಂದ ಯಾವುದೇ ದಂಡ ಇರುವುದಿಲ್ಲ ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಕಾರ್ಯ ಮತ್ತು ಪಾಲನಾ ವಿಭಾಗದ ಗದಗ ಅಧೀಕ್ಷಕ ಅಭಿಯಂತರರಾದ ನಜ್ಮುನ್ನಿಸಾ ಕೆ. ಅಲ್ಲಾವಲ್ಲಿ ತಿಳಿಸಿದರು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಎಚ್.ಟಿ. ಗ್ರಾಹಕರ ಕುಂದು-ಕೊರತೆಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾದ ಹೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ರಾಜೇಶ ಬಿ. ಕಲ್ಯಾಣಶೆಟ್ಟಿ ಮಾತನಾಡುತ್ತಾ, ಒಂದು ಉದ್ಯಮ ನಡೆಯಬೇಕಾದರೆ ವಿದ್ಯುತ್ ಅವಶ್ಯಕತೆ ಇರುತ್ತದೆ. 2003ರಲ್ಲಿ ಕೆ.ಇ.ಆರ್.ಸಿ.ಯವರು ಹೆಸ್ಕಾಂಗೆ ಲೈಸನ್ಸ್ ನೀಡಿದ್ದು, ನಾವು ಅವರ ಅದೇಶದ ಮೇಲೆ ವಿದ್ಯುತ್ ಸರಬರಾಜು ಮಾಡುತ್ತೇವೆ. ದರವನ್ನು ಕೂಡಾ ಕೆ.ಇ.ಆರ್.ಸಿ.ಯವರು ನಿಗದಿ ಪಡಿಸುತ್ತಾರೆ. 150 ಎಚ್.ಪಿ. ಮೇಲೆ ಇದ್ದರೆ ಎಚ್.ಟಿ.ಗೆ ಹೋಗಬೇಕಾಗುತ್ತದೆ. ಪಡೆದ ವಿದ್ಯುತ್ನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ ಇದ್ದರೆ ಅದು ಉದ್ಯಮಿಗಳಿಗೆ ನಷ್ಟವಾಗುತ್ತದೆ ಎಂದು ತಿಳಿಸಿದರು.
ಹೆಸ್ಕಾಂ ಕಾರ್ಯ ಮತ್ತು ಪಾಲನ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ವೀರೇಶ ಟಿ. ರಾಜೂರ್ ಮಾತನಾಡುತ್ತಾ, ಎಚ್.ಟಿ. ಗ್ರಾಹಕರು ತಮ್ಮ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೆ ಅವುಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಸರ್ಕಾರವು ಉದ್ಯಮಗಳ ಬೆಳವಣಿಗೆಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ. ಅವುಗಳನ್ನು ಸಮಪರ್ಕವಾಗಿ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಸಂಸ್ಥೆಯ ವಿದ್ಯುತ್ ಉಪ ಸಮಿತಿ ಚೇಯರ್ಮನ್ ಉದಯರವಿ ಸ್ವಾಗತಿಸುವ ಮೂಲಕ ಎಚ್.ಟಿ. ಗ್ರಾಹಕರ ತೊಂದರೆಗಳು ಸಾಕಷ್ಟು ಇದ್ದು ಅವುಗಳನ್ನು ಪರಿಹರಿಸಿಕೊಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಸಂಸ್ಥೆಯ ಸಹ ಗೌರವ ಕಾರ್ಯದರ್ಶಿಗಳಾದ ರಾಘವೇಂದ್ರ ಎಸ್. ಕಾಲವಾಡ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಜಯದೇವ ಎಂ. ಮೆಣಸಗಿ ವಂದಿಸಿದರು. ಸಭೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಉದ್ದಿಮೆದಾರರು ಮತ್ತು ಹೆಸ್ಕಾಂ ಅಧಿಕಾರಿಗಳು ಪಾಲ್ಗೊಂಡಿದ್ದರೆಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಚನ್ನವೀರಪ್ಪ ಪ್ರಭಣ್ಣ ಹುಣಸಿಕಟ್ಟಿ ತಿಳಿಸಿದ್ದಾರೆ.
ಸಭೆಯ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಸಂಗಪ್ಪ ಗುಡಿಮನಿ ಮಾತನಾಡುತ್ತಾ, ಒಂದು ಉದ್ಯಮವನ್ನು ನಡೆಸಬೇಕಾದರೆ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಉದ್ದಿಮೆದಾರರಿಗೆ ಯಾವುದೇ ರೀತಿಯಿಂದ ಹೊರೆ ಮಾಡಬಾರದು. ಸರ್ಕಾರದಿಂದ ಉದ್ಯಮಗಳಿಗೆ ರೂ. 4 ದರದಲ್ಲಿ ವಿದ್ಯುತ್ ಪೂರೈಕೆ ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಇನ್ನು ಉದ್ಯಮವು ತೊಂದರೆಗೆ ಒಳಗಾದ ಸಂದರ್ಭದಲ್ಲಿ ವಿದ್ಯುತ್ ಬಿಲ್ನ್ನು ನಿಗದಿತ ಸಮಯಕ್ಕಿಂತ ವಿಳಂಬವಾದಲ್ಲಿ ಬಡ್ಡಿರಹಿತವಾಗಿ ಬಿಲ್ನ್ನು ಆಕರಣೆ ಮಾಡಬೇಕೆಂದು ವಿನಂತಿಸಿದರು.



