ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸರಕಾರ ವಿವಿಧ ಇಲಾಖೆಗಳಿಗೆ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ನೀಡಿರುವ ಅನುದಾನವು ಲ್ಯಾಪ್ಸ್ ಆಗದಂತೆ, ಮರುಬಳಕೆ ಆಗದಂತೆ ಸಮರ್ಪಕವಾಗಿ ಬಳಕೆ ಮಾಡಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ದೊಡ್ಡಮನಿ ಹೇಳಿದರು.
ಅವರು ಶುಕ್ರವಾರ ಶಿರಹಟ್ಟಿಯ ತಾ.ಪಂ ಕಚೇರಿಯಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು 50 ಪ್ರತಿಶತಕ್ಕಿಂತ ಹೆಚ್ಚು ಫಲಾನುಭವಿಗಳಿರುವ ಪ್ರದೇಶಗಳಲ್ಲಿ ಬಳಸಬೇಕು. ಒಂದು ವೇಳೆ ನಿಗದಿಪಡಿಸಿದ ಪ್ರದೇಶದಲ್ಲಿ 40 ಪ್ರತಿಶತಕ್ಕಿಂತ ಕಡಿಮೆ ಅರ್ಹ ಫಲಾನುಭವಿಗಳು ಇದ್ದರೆ ಅಂತಹ ಪ್ರದೇಶಗಳಲ್ಲಿ ಜನಸಂಖ್ಯೆ ಅನುಸಾರ ಅನುದಾನ ನಿಗದಿಪಡಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನಾ ಸಭೆಗೆ 28 ಇಲಾಖೆಗಳಲ್ಲಿ 14 ಇಲಾಖೆ ಅಧಿಕಾರಿಗಳು ಮಾತ್ರ ಹಾಜರಿರುವುದು ಹಾಗೂ ಕೆಲವರು ತಮ್ಮ ಸಿಬ್ಬಂದಿಗಳನ್ನು ಕಳುಹಿಸಿರುವುದನ್ನು ಗಮನಿಸಿದ ತಾ.ಪಂ ಇಓ ಸಭೆಗೆ ಗೈರು ಉಳಿದ ಇಲಾಖಾಧಿಕಾರಿಗಳಿಗೆ ನೋಟೀಸ್ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಾಲ ಲಮಾಣಿ ಅವರಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಾಲ ಲಮಾಣಿ, ಸಿಡಿಪಿಓ ಮೃತ್ಯುಂಜಯ ಗುಡ್ಡದಾನ್ವೇರಿ, ಬಿಇಓ ಎಚ್.ಎನ್. ನಾಯ್ಕ, ಪಿಆರ್‌ಇಡಿ ಮಲ್ಲಿಕಾರ್ಜುನ ಪಾಟೀಲ, ಡಾ. ಪವನ ಫಾಯದೆ ಮುಂತಾದವರು ಉಪಸ್ಥಿತರಿದ್ದರು.



