ಅಧ್ಯಕ್ಷರಾಗಿ ವಿ.ಕೆ. ಗುರುಮಠ ಆಯ್ಕೆ

0
vikasa utsava
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಉತ್ತರ ಕರ್ನಾಟಕ ಕಲಾವಿದರ ಹಾಗೂ ಕಲಾಪೋಷಕರ ಸಂಘಟನೆಯಾದ ಗದುಗಿನ ಕಲಾ ವಿಕಾಸ ಪರಿಷತ್ತಿನ, ರಾಷ್ಟ್ರೀಯ ಮಟ್ಟದ ಕಲಾ ವಿಕಾಸ ಉತ್ಸವ-2024 ಸಮಾರಂಭದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ನಗರದ ಪ್ರಥಮ ದರ್ಜೆ ಗುತ್ತಿಗೆದಾರ, ಸಮಾಜ ಸೇವಕರಾದ ವಿ.ಕೆ. ಗುರುಮಠ ಇವರನ್ನು ಪರಿಷತ್‌ನ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕಾರಣಿ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಪರಿಷತ್ ಸಂಸ್ಥಾಪಕ ಸಿ.ಕೆ.ಹೆಚ್ ಶಾಸ್ತ್ರೀ (ಕಡಣಿ) ತಿಳಿಸಿದ್ದಾರೆ.

Advertisement

ಈ ಹಿಂದಿನ ಉತ್ಸವಗಳಲ್ಲಿ ವಿಶ್ವನಾಥ್ ರಾಮನಕೊಪ್ಪ, ಡಾ. ಜಿ.ಬಿ. ಪಾಟೀಲ್, ವಿಜಯ್ ಕುಮಾರ್ ಗಡ್ಡಿ, ಎಚ್.ಎಸ್. ಶಿವನಗೌಡರ್, ಸಿರಾಜ್ ಬಳ್ಳಾರಿ, ಮಂಜುನಾಥ್ ರೆಡ್ಡಿ, ಡಾ. ಶೇಖರ ಸಜ್ಜನರ್ ಮೊದಲಾದ ಚಿಂತಕರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕಲಾವಿಕಾಸ ಪರಿಷತ್ತಿನ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಿದ್ದಾರೆ ಎಂದು ಸಭೆಯಲ್ಲಿ ಶಾಸ್ತ್ರೀಗಳು ನೆನಪಿಸಿಕೊಂಡರು. ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಹಮ್ಮಿಕೊಳ್ಳುವ ಎರಡು ದಿನದ ಉತ್ಸವಕ್ಕೆ ಸ್ಥಳೀಯ ಸಾಂಸ್ಕೃತಿಕ ಸಂಘಟನೆಗಳ ಮತ್ತು ಸಂಗೀತ-ನೃತ್ಯ ಕಲಾಪ್ರಿಯರ ಸಹಕಾರ ಪಡೆಯಲಾಗುವುದು ಎಂದರು. ಮುಂದಿನ ದಿನಗಳಲ್ಲಿ ವಿ.ಕೆ. ಗುರುಮಠ ಅವರ ಅಧ್ಯಕ್ಷತೆಯಲ್ಲಿ ಸಂಘ-ಸಂಸ್ಥೆಗಳ ಸಭೆ ಕರೆದು, ಪೂರ್ಣ ಪ್ರಮಾಣದ ಸ್ವಾಗತ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ಪರಿಷತ್‌ನ ಹಿತೈಷಿ, `ವಿಭೂತಿ’ ಮಾಸ ಪತ್ರಿಕೆಯ ಸಂಪಾದಕ, ಸಾಹಿತಿ ಅಂದಾನೆಪ್ಪ ವಿಭೂತಿ, ನಿವೃತ್ತ ಚಿತ್ರಕಲಾ ಶಿಕ್ಷಕ, ಖ್ಯಾತ ಕಲಾವಿದ ಶಿವಪ್ಪ ಬೆನಕಣ್ಣವರ, ರುದ್ರೇಶ ಕೊರವರ್, ಪ್ರದೀಪ ನೆರ್ತಿ, ಎಫ್.ಎ. ಹಿರೇಮಠ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದು ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಹಂಚಿಕೊಂಡರು.

ಕಲಾ ವಿಕಾಸ ಪರಿಷತ್ತು ಶುದ್ಧ ಶಾಸ್ತ್ರೀಯ ಸಂಗೀತಕ್ಕಾಗಿ ಸಮರ್ಪಿಸಿಕೊಂಡ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಅವಳಿ ನಗರದಲ್ಲಿ ಮಾತ್ರವಲ್ಲದೆ ದೇಶದ ಅನೇಕ ರಾಜ್ಯಗಳಲ್ಲಿ ಬಾಲ, ಯುವ ಮತ್ತು ಹಿರಿಯ ಕಲಾವಿದರಿಗಾಗಿ ಸಂಗೀತ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೇಶದ ಕಲಾ ದಿಗ್ಗಜರ ಚಿರಪರಿಚಿತ ಸಂಸ್ಥೆಯಾಗಿದೆ.


Spread the love

LEAVE A REPLY

Please enter your comment!
Please enter your name here